ಬೆಂಗಳೂರು: ವಿಶ್ವಬ್ಯಾಂಕ್ ನೆರವಿನೊಂದಿಗೆ 2000 ಕೋಟಿ ರು. ವೆಚ್ಚದಲ್ಲಿ ನಗರದಲ್ಲಿ ಮಳೆಯಿಂದಾಗುವ ಸಮಸ್ಯೆಗಳಿಗೆ ಪರಿಹಾರ ರೂಪಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಸುದ್ದಿಗಾರರರಿಗೆ ಮಾಹಿತಿ ನೀಡಿದ ಅವರು, ಬೆಂಗಳೂರಲ್ಲಿ ಮಳೆಯಿಂದ ಆಗುತ್ತಿರುವ ಸಮಸ್ಯೆಗಳ ಕುರಿತಂತೆ ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಶ್ವಬ್ಯಾಂಕ್‌ನಿಂದ 1,750 ಕೋಟಿ ರು. ಹಾಗೂ ಎನ್‌ಡಿಆರ್‌ಎಫ್‌ನಿಂದ 250 ಕೋಟಿ ರು. ಹಾಗೂ ಬಿಬಿಎಂಪಿಯ ಅನುದಾನದೊಂದಿಗೆ ಬೃಹತ್ ರಾಜಕಾಲುವೆಗಳನ್ನು ನವೀಕರಣ ಮಾಡಲಾಗುತ್ತದೆ.
ಹೆಚ್ಚು ನೀರು ಬರುವಂತಹ ಜಾಗಗಳಲ್ಲಿ ಕೆರೆಗಳಿದ್ದಲ್ಲಿ ಅಲ್ಲಿ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಕೆರೆಗಳಲ್ಲಿ ಹೂಳು ತೆಗೆದು ನೀರು ಶೇಖರಣೆ ಮಾಡಲಾಗುತ್ತದೆ. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಲಿದೆ. ನಗರದ ಎಲ್ಲ ಮೋರಿಗಳನ್ನು ಹೊಸ ರೀತಿಯಲ್ಲಿ ವಿನ್ಯಾಸ ಮಾಡಲಾಗುತ್ತದೆ. ಇದರಿಂದ ಮಳೆ ಬಂದಾಗ ರಸ್ತೆಗಳಲ್ಲಿ ನೀರು ನಿಲ್ಲುವುದು ತಪ್ಪಲಿದೆ. ಬೆಂಗಳೂರಿನಲ್ಲಿ ಪ್ರವಾಹದ ಸ್ಥಿತಿ ಆಗದಂತೆ ಈಗಾಗಲೇ ಯೋಜನೆಗಳನ್ನು ರೂಪಿಸಲಾಗಿದೆ. ಕೆರೆಗಳಲ್ಲಿ ನೀರು ಸಂಗ್ರಹ ಮಾಡುವುದು ಹಾಗೂ ಚರಂಡಿಗಳ ಮರು ನಿರ್ಮಾಣದ ಮೂಲಕ ಪ್ರವಾಹದ ಪರಿಸ್ಥಿತಿ ತಲೆದೋರದಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಶನಿವಾರದಿಂದ ಸೋಮವಾರದ ವರೆಗೆ ಸುರಿದ ಮಳೆಗೆ ಸುಮಾರು 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಒಂದೆರಡು ಗಂಟೆಯಲ್ಲಿ ನೀರು ಖಾಲಿಯಾಗಿದೆ. ಇನ್ನು 97 ಕಡೆ ಜಂಕ್ಷನ್ ಮತ್ತು ರಸ್ತೆಯಲ್ಲಿ ನೀರು ನಿಂತುಕೊಂಡಿದೆ. 3 ಮರ ಹಾಗೂ 12ಕ್ಕೂ ಅಧಿಕ ಮರ ಕೊಂಬೆ ಧರೆಗುರುಳಿವೆ ಎಂದು ತಿಳಿಸಿದರು.