ಫೆಬ್ರವರಿ 1 ರಿಂದ ದೇಶಾದ್ಯಂತ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿದ್ದು, ಪ್ರತಿ ತಿಂಗಳು ಹಣಕಾಸಿಗೆ ಸ೦ಬ೦ಧಿಸಿದಂತೆ ಕೆಲವು ಪ್ರಮುಖ ಬದಲಾವಣೆಗಳಾಗುತ್ತಿರುತ್ತವೆ. ಮುಂಬರುವ ತಿಂಗಳಿನಲ್ಲಿಯೂ ಸಹ ಪ್ರಮುಖ ಆರ್ಥಿಕ ಬದಲಾವಣೆಗಳು ಕಂಡುಬರಲಿದೆ. ಇದು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಲಿದೆ. ವಿಶೇಷವೆಂದರೆ, ಇದೇ ದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮ೦ಡಿಸಲಿದ್ದಾರೆ.
ಸಿಲಿಂಡರ್ ಬೆಲೆ ಏರಿಕೆ/ಇಳಿಕೆ ಸಾಧ್ಯತೆ (Cylinder price)
ತೈಲ ಕಂಪನಿಗಳು ಪ್ರತಿ ತಿಂಗಳ 1ನೇ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತವೆ. ಫೆಬ್ರವರಿ 1 ರಂದು ಬಜೆಟ್ ಕೂಡ ಇರುವುದರಿಂದ, ಈ ಬಾರಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆ ಆಗುವ ಸಾಧ್ಯತೆ ಇದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಎರಡು ಬಾರಿ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು.
ಚಿಪ್‌ರಹಿತ ಎಟಿಎಂ (Chipless ATMs)
ವಂಚನೆ ತಡೆಯುವ ನಿಟ್ಟಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮಹತ್ವದ ನಿರ್ಧಾರ ಕೈಗೊಂಡಿದೆ. ಫೆಬ್ರವರಿ 1 ರಿಂದ, PNB ಗ್ರಾಹಕರು ಚಿಪ್ ಇಲ್ಲದ ಎಟಿಎಂ ಯಂತ್ರಗಳಿಂದ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಕೇವಲ ಮ್ಯಾಗ್ನೆಟಿಕ್ ಸ್ಟ್ರಿಪ್ ಹೊಂದಿರುವ ಹಳೆಯ ಎಟಿಎಂ ಯಂತ್ರಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಈ ಹೊಸ ನಿಯಮವು ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಪಡಿತರ, ಗ್ಯಾಸ್ ಕನೆಕ್ಷನ್‌ಗೆ ಆಧಾರ್ ಲಿಂಕ್ ಕಡ್ಡಾಯ
ಸರ್ಕಾರವು ರೇಷನ್ ಕಾರ್ಡ್ ಮತ್ತು ಗ್ಯಾಸ್ ಕನೆಕ್ಷನ್ ಗಳಿಗೆ ಆಧಾರ್ ಲಿಂಕ್ (e-KYC) ಮಾಡುವುದನ್ನು ಕಡ್ಡಾಯಗೊಳಿಸಿದೆ. ಗಡುವಿನೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಫಲಾನುಭವಿಗಳ ಪಡಿತರ ಮತ್ತು ಗ್ಯಾಸ್ ಸಬ್ಸಿಡಿಯನ್ನು ಕಡಿತಗೊಳಿಸುವ ಸಾಧ್ಯತೆಯಿದೆ ಎ೦ದು ಎಚ್ಚರಿಕೆ ನೀಡಿದೆ. ಈ ನಿರ್ಧಾರವು ಲಕ್ಷಾಂತರ ಜನರಿಗೆ ನೇರವಾಗಿ ಪರಿಣಾಮ ಬೀರಲಿದೆ.
ಫಾಸ್ಟ್ ಟ್ಯಾಗ್ ಕೆವೈಸಿ (FASTag KYC)
ಹೊಸ ವಾಹನಗಳಿಗೆ ಫಾಸ್ಟ್ ಟ್ಯಾಗ್ ಪಡೆಯುವ ಕೆವೈಸಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಇನ್ನು ಮು೦ದೆ ಬ್ಯಾ೦ಕುಗಳು ನೇರವಾಗಿ ವಾಹನದ ನೋಂದಣಿ (RC) ಡೇಟಾಬೇಸ್ ಅನ್ನು ಪರಿಶೀಲಿಸಿ ಫಾಸ್ಟ್ ಟ್ಯಾಗ್ ಅನ್ನು ಸಕ್ರಿಯಗೊಳಿಸಲಿವೆ. ಈ ನೂತನ ವ್ಯವಸ್ಥೆಯು ವಾಹನ ಸವಾರರ ಸಮಯವನ್ನು ಉಳಿಸುವ ಜೊತೆಗೆ ಪ್ರಕ್ರಿಯೆಯನ್ನು ಸರಳಗೊಳಿಸುವ ನಿರೀಕ್ಷೆಯಿದೆ.




