(Ayushman Bharat) ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಆದಾಯವನ್ನು ಲೆಕ್ಕಿಸದೇ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸಂಪುಟ ಸಭೆಯ ನಂತರ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಪಿಎಂ ಜನ ಆರೋಗ್ಯ ಯೋಜನೆ ಅಡಿಯಲ್ಲಿ ರಕ್ಷಣೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಈಗಾಗಲೇ ಅನೇಕ ಕುಟುಂಬಗಳು ವ್ಯಾಪ್ತಿಗೆ ಒಳಪಟ್ಟಿವೆ ಮತ್ತು ಹಿರಿಯ ನಾಗರಿಕರನ್ನು ಹೊಂದಿವೆ. ಅಂತಹ ಕುಟುಂಬಗಳಲ್ಲಿ ಹೆಚ್ಚುವರಿ ಕವರೇಜ್, ಟಾಪ್-ಅಪ್ ಕವರೇಜ್ 5 ಲಕ್ಷ ರೂಪಾಯಿ ಇದೆ. 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮಾ ರಕ್ಷಣೆ ನೀಡುವ ಗುರಿಯನ್ನು ಈ ವ್ಯಾಪ್ತಿ ಹೊಂದಿದೆ ಎಂದು ಸಚಿವರು ಹೇಳಿದರು.
ಏನಿದು ಕೇಂದ್ರ ಸರ್ಕಾರದ ಯೋಜನೆ?:
70 ವರ್ಷ ದಾಟಿದವರಿಗೆ ಉಚಿತ ಆರೋಗ್ಯ ಚಿಕಿತ್ಸೆ ಇದಾಗಿದ್ದು ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಯೋಜನೆ ಎಂದು ಹೆಸರಿಡಲಾಗಿದೆ. ದೇಶದ ಒಟ್ಟು 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಸಿಗಲಿದೆ. 5 ಲಕ್ಷ ರೂಪಾಯಿ ವರೆಗೂ ಚಿಕಿತ್ಸೆಗೆ ಸೌಲಭ್ಯ ಲಭಿಸಲಿದೆ. ಕಳೆದ ಬಜೆಟ್ ನಲ್ಲಿ ಘೋಷಿಸಲಾಗಿದ್ದ ಈ ಯೋಜನೆಗೆ ಇದೀಗ ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು ಬುಧವಾರದಂದು ಈ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದಾರೆ.
ಈಗಾಗಲೇ ಆಯುಷ್ಮಾನ್ ಕಾರ್ಡ್ ಇರುವವರಿಗೆ ಹೆಚ್ಚುವರಿಯಾಗಿ 5 ಲಕ್ಷ ರೂ ಸೌಲಭ್ಯ ಲಭಿಸಲಿದೆ. ಬಡವರು, ಮಧ್ಯಮ ವರ್ಗದ ಎಲ್ಲರಿಗೂ ಈ ಸೌಲಭ್ಯ ಪಡೆಯಬಹುದು. ಅದೇ ರೀತಿ ಸಿಜಿಎಚ್‌ಎಸ್, ಇಎಸ್‌ಐಸಿ, ಖಾಸಗಿ ವಿಮೆ ಇದ್ದರೂ ಕೇಂದ್ರದ ಈ ಯೋಜನೆಯನ್ನು ಬಳಸಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.