ಬೆಂಗಳೂರು: ರಾಜ್ಯ ಸರ್ಕಾರದಿಂದ ವಿದ್ಯುತ್ ದರ ಏರಿಕೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಕೆ ಮಾಡಿ ಕೊರೊನಾ ಸೋಂಕಿನಿಂದಾಗಿ ಸಂಕಷ್ಟಕ್ಕೀಡಾಗಿರುವ ರಾಜ್ಯದ ಜನರ ಗಾಯದ ಮೇಲೆ ಬರೆ ಎಳೆದಿದೆ. ಉದ್ಯೋಗಗಳನ್ನು ಕಳೆದುಕೊಂಡು ಆದಾಯವಿಲ್ಲದೆ ಜೀವನ ನಿರ್ವಹಣೆಗಾಗಿ ಪರದಾಡುತ್ತಿರುವ ಜನರಿಗೆ ನೆರವಾಗಬೇಕಾಗಿದ್ದ ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಅವರನ್ನು ಇನ್ನಷ್ಟು ಕಷ್ಟಕ್ಕೆ ನೂಕಿದೆ.
ನಮ್ಮದೇ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿ ಕೇಂದ್ರದಿಂದ ಅಧಿಕ ದರದಲ್ಲಿ ವಿದ್ಯುತ್ ಖರೀದಿಸಿ ನಷ್ಟದ ಲೆಕ್ಕ ತೋರಿಸುತ್ತಿರುವ ರಾಜ್ಯ ಸರ್ಕಾರದ ಈ ಕಸರತ್ತಿನ ಹಿಂದೆ ಭ್ರಷ್ಟಾಚಾರದ ವಾಸನೆ ಬರತೊಡಗಿದೆ. ಬಿಜೆಪಿ ಸರ್ಕಾರದ ಹಿಂದಿನ ಅವಧಿಯಲ್ಲಿಯೂ ವಿದ್ಯುತ್ ಖರೀದಿಯ ಹಗರಣವನ್ನು ಜನ ನೆನಪುಮಾಡಿಕೊಳ್ಳುವಂತಾಗಿದೆ.
ನಮ್ಮ ಸರ್ಕಾರದ ಪ್ರಗತಿಪರ ವಿದ್ಯುತ್ ನೀತಿಯಿಂದಾಗಿ ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿತ್ತು. ಬೇರೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಬಳಿ ವಿದ್ಯುತ್ ಗಾಗಿ ಮೊರೆ ಇಡುತ್ತಿದ್ದ ನಾವು ಇಂದು ಹೆಚ್ಚುವರಿ ವಿದ್ಯುತ್ತನ್ನು ಮಾರಾಟ ಮಾಡುವ ಸುಭದ್ರ ಸ್ಥಿತಿಯಲ್ಲಿದ್ದೇವೆ. ಹೀಗಿದ್ದರೂ ದರ ಏರಿಕೆ ಯಾಕೆ?
ರಾಯಚೂರಿನ ಆರ್‌ಟಿಪಿಎಸ್ ನಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಖಾಸಗಿ ಕಂಪೆನಿಗಳು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಹೆಚ್ಚಿಸಿವೆ. ಯಥೇಚ್ಚವಾಗಿ ಸೌರ ಮತ್ತು ಪವನ ವಿದ್ಯುತ್ ಕೂಡಾ ಲಭ್ಯ ಇದೆ. ಹೀಗಿದ್ದರೂ ಯುನಿಟ್ ಗೆ 50 ಪೈಸೆ ಹೆಚ್ಚು ನೀಡಿ ವಿದ್ಯುತ್ ಖರೀದಿಸುತ್ತಿರುವುದು ಯಾಕೆ?
ಅನಗತ್ಯ ವಿದ್ಯುತ್ ಖರೀದಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ವಾರ್ಷಿಕ ಐದರಿಂದ ಆರು ಸಾವಿರ ಕೋಟಿ ನೀಡುತ್ತಿದೆ. ವಿದ್ಯುತ್ ಕೊರತೆ ಇದ್ದರೆ ರಾಯಚೂರಿನ ಆರ್ ಟಿಪಿಎಸ್ ಸ್ಥಾವರದಲ್ಲಿ ಉತ್ಪಾದನೆ ಶುರುಮಾಡಬಹುದಿತ್ತು. ಇದರಿಂದ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಲೂ ಅವಕಾಶ ಇತ್ತು. ಅದೆಲ್ಲ ಬಿಟ್ಟು ವಿದ್ಯುತ್ ಖರೀದಿಗೆ ಯಾಕೆ ಇಷ್ಟು ಆಸಕ್ತಿ?
ಕೊರೊನಾ ಪರಿಣಾಮದಿಂದಾಗಿ ಉದ್ಯಮ-ವ್ಯಾಪಾರಗಳು ನಷ್ಟದಲ್ಲಿರುವಾಗ ವಿದ್ಯುತ್ ದರವನ್ನು ಕಡಿಮೆಗೊಳಿಸಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕಾಗಿದ್ದ ಸರ್ಕಾರ, ವಿವೇಚನಾರಹಿತವಾಗಿ ವಿದ್ಯುತ್ ದರ ಏರಿಸಿರುವುದು ಮೂರ್ಖ ತೀರ್ಮಾನ.
ರಾಜ್ಯದಲ್ಲಿ ಸುಮಾರು 150 ರಿಂದ 200 ಮಿಲಿಯನ್ ಯುನಿಟ್ಗಳಷ್ಟು ವಿದ್ಯುಚ್ಛಕ್ತಿ ಗೆ ಬೇಡಿಕೆ ಇದೆ. ಇದರ ಎರಡರಷ್ಟು ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ. ಇದರಲ್ಲಿ ಶೇ.40 ರಿಂದ 50 ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರ ಮತ್ತು ಪವನ ವಿದ್ಯುತ್ ಮೂಲಗಳಿಂದ ಉತ್ಪಾದನೆಯಾಗುತ್ತಿದೆ.
GST, ನೋಟ್ ಬ್ಯಾನ್, ಕೊರೋನಾ ಸಂಕಷ್ಟಗಳಿಂದ ನಲುಗಿರುವ ಕೈಗಾರಿಕೆ, ವಾಣಿಜ್ಯೋದ್ಯಮ, ಜನರ ಮೇಲೆ ವಿದ್ಯುತ್ ದರ ಏರಿಕೆಯ ಹೊರೆಯನ್ನು ಹೊರಿಸದೆ, ಇನ್ನಷ್ಟು ಇಳಿಸಿ ಆರ್ಥಿಕತೆಗೆ ಚೈತನ್ಯ ನೀಡಬೇಕೆಂದು ಆಗ್ರಹಿಸುತ್ತೇನೆ. ವಿದ್ಯುಚಕ್ತಿ ದರವನ್ನು ವೈಜ್ಞಾನಿಕವಾಗಿ ಹೇಗೆ ಇಳಿಸಬಹುದೆಂಬ ಬಗ್ಗೆ ಸರ್ಕಾರ ಬಯಸಿದರೆ ಸಲಹೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಕೆ ಮಾಡಿ ಕೊರೊನಾ ಸೋಂಕಿನಿಂದಾಗಿ ಸಂಕಷ್ಟಕ್ಕೀಡಾಗಿರುವ ರಾಜ್ಯದ ಜನರ ಗಾಯದ ಮೇಲೆ ಬರೆ ಎಳೆದಿದೆ. ಉದ್ಯೋಗಗಳನ್ನು ಕಳೆದುಕೊಂಡು ಆದಾಯವಿಲ್ಲದೆ ಜೀವನ ನಿರ್ವಹಣೆಗಾಗಿ ಪರದಾಡುತ್ತಿರುವ ಜನರಿಗೆ ನೆರವಾಗಬೇಕಾಗಿದ್ದ ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಅವರನ್ನು ಇನ್ನಷ್ಟು ಕಷ್ಟಕ್ಕೆ ನೂಕಿದೆ. 1/8 pic.twitter.com/SOTqjAIGH9
— Siddaramaiah (@siddaramaiah) November 6, 2020