ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸುತ್ತಿರುವ ಮಧ್ಯೆ 6 ಜನ ಸಚಿವರ ರಾಜೀನಾಮೆಗೆ ಆಗ್ರಹಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.
ವಿಧಾನಸೌಧ ಕಲಾಪ ಮುಂದೂಡಿಕೆಯಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ 6 ಜನ ಸಚಿವರಾದ ಡಾ. ಕೆ. ಸುಧಾಕರ್, ಬಿ.ಸಿ ಪಾಟೀಲ್, ಎಸ್.ಟಿ. ಸೋಮಶೇಖರ್, ನಾರಾಯಣ ಗೌಡ, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜ್ ಕೂಡ ರಾಜೀನಾಮೆ ನೀಡುವವರೆಗೂ ಧರಣಿ ನಡೆಸುವುದಾಗಿ ಸ್ಪಷ್ಟಪಡಿಸಿದ್ದು, ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ, ಸಂತ್ರಸ್ತೆಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.