ನವದೆಹಲಿ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪುತ್ರಿ ಆಯ್‌ರಾ ಹೋಳಿ ಆಚರಿಸಿದ್ದಕ್ಕೆ ಸಂಬಂಧಿಸಿದಂತೆ ಮೌಲಾನ ಶಹಬುದ್ದೀನ್ ರಜ್ವಿ ಅವರು ಟೀಕೆ ಮಾಡಿದ್ದಾರೆ. ಶಮಿ ಪುತ್ರಿ ಹೋಳಿ ಆಚರಿಸಿದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ನಂತರ ರಜ್ವಿ ಅವರು ಪ್ರತಿಕ್ರಿಯಿಸಿದ್ದಾರೆ.
“ಮುಸ್ಲಿಮರು ಹೋಳಿ ಆಚರಿಸುವುದು ಷರಿಯಾ ಕಾನೂನಿಗೆ ವಿರುದ್ಧವಾದದ್ದು, ಹಿಂದೂಗಳ ಪ್ರಮುಖ ಹಬ್ಬವಾದ ಹೋಳಿಯನ್ನು ಮುಸ್ಲಿಮರು ಆಚರಿಸಬಾರದು” ಎಂದು ಅವರು ಒತ್ತಿಹೇಳಿದ್ದಾರೆ.
ಮೌಲಾನ ಶಹಬುದ್ದೀನ್ ರಜ್ವಿ ಅವರು ವೀಡಿಯೊದಲ್ಲಿ ಮಾತನಾಡುತ್ತಾ, “ಶಮಿ ಪುತ್ರಿ ಇನ್ನೂ ಚಿಕ್ಕವಳು. ಅವಳು ತಿಳಿದಿಲ್ಲದೆ ಹೋಳಿ ಆಚರಿಸಿದ್ದರೆ, ಅದು ತಪ್ಪಲ್ಲ. ಆದರೆ, ತಿಳಿದಿದ್ದೂ ಸಹ ಹೋಳಿ ಆಚರಣೆಯಲ್ಲಿ ಭಾಗವಹಿಸಿದರೆ, ಅದು ಷರಿಯಾ ಕಾನೂನಿಗೆ ವಿರುದ್ಧವಾಗುತ್ತದೆ” ಎಂದು ತಿಳಿಸಿದ್ದಾರೆ. ಅವರು ಶಮಿ ಮತ್ತು ಅವರ ಕುಟುಂಬವನ್ನು ಉದ್ದೇಶಿಸಿ, “ಮಕ್ಕಳಿಗೆ ಷರಿಯಾ ಕಾನೂನಿಗೆ ವಿರುದ್ಧವಾದ ಕೆಲಸಗಳನ್ನು ಮಾಡಲು ಅವಕಾಶ ನೀಡಬೇಡಿ” ಎಂದು ಸಲಹೆ ನೀಡಿದ್ದಾರೆ. ಹೋಳಿಯಂತಹ ಹಿಂದೂ ಹಬ್ಬಗಳಿಂದ ಮುಸ್ಲಿಮರು ದೂರವಿರಬೇಕು ಎಂದು ಅವರು ಪುನರಾವರ್ತಿಸಿದ್ದಾರೆ.
ಶಮಿ ಪತ್ನಿ ಹಸೀನ್ ಜಹಾನ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪುತ್ರಿ ಆಯ್‌ರಾ ಬಣ್ಣದೋಕುಳಿ ಆಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಚಿತ್ರಗಳು ವೈರಲ್ ಆದ ನಂತರ, ಕೆಲವರು ಆಯ್‌ರಾಳನ್ನು ಟೀಕಿಸಿ ಅವಹೇಳನಕರವಾದ ಕಾಮೆಂಟ್‌ಗಳನ್ನು ಮಾಡಿದ್ದರು.
ಇದಕ್ಕೂ ಮುಂಚೆ, ರಮ್ಜಾನ್ ತಿಂಗಳಲ್ಲಿ ಉಪವಾಸವನ್ನು ಪಾಲಿಸದಿದ್ದಕ್ಕಾಗಿ ಶಮಿಯನ್ನು ರಜ್ವಿ ಅವರು ಟೀಕಿಸಿದ್ದರು. ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಶಮಿ ಎನರ್ಜಿ ಡ್ರಿಂಕ್ ಸೇವಿಸಿದ ಚಿತ್ರ ವೈರಲ್ ಆಗಿದ್ದು, ಇದು ಚರ್ಚೆಗೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ರಜ್ವಿ ಅವರು ಶಮಿಯನ್ನು ಟೀಕಿಸಿದ್ದರು.