ನವದೆಹಲಿ: ‘ಯೇ ಮಾಯಾ ಚೇಸಾವೆ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಮಂತಾ ತಮ್ಮ ಸಹನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇಬ್ಬರ ನಡುವೆ ಏನೋ ತಪ್ಪಾದ ಕಾರಣದಿಂದ ವಿಚ್ಛೇದನ ಪಡೆದಿದ್ದರು. ನಾಗ ಚೈತನ್ಯ ಇದೀಗ ನಟಿ ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾಗಿದ್ದಾರೆ. ಇತ್ತ, ಸಮಂತಾ ತಮ್ಮ ಟ್ಯಾಟೂ ವಿಚಾರದಿಂದ ಸುದ್ದಿಯಾಗಿದ್ದಾರೆ.
ಸಮಂತಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದು, ಅವರ ಕೈಯಲ್ಲಿದ್ದ ಹಚ್ಚೆ ಮಾಯವಾಗಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಸಮಂತಾ ಅವರು ಈ ಹಿಂದೆ ತಮ್ಮ ಬಲಗೈಯಲ್ಲಿ ಹಾಕಿಸಿದ್ದ ಟ್ಯಾಟೂವನ್ನು ತೆಗೆದುಹಾಕಿದ್ದಾರೆ. ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ಒಂದೇ ರೀತಿಯ ಟ್ಯಾಟೂ ಹಾಕಿಸಿಕೊಂಡಿದ್ದರು.
ಈ ಫೋಟೋಗಳನ್ನು ಹಂಚಿಕೊಂಡ ರೆಡ್ಡಿಟ್ ಪೋಸ್ಟ್‌ನಲ್ಲಿ, “ಸಮಂತಾ ಕೊನೆಗೂ ತಮ್ಮ ಟ್ಯಾಟೂವನ್ನು ತೆಗೆದಿರುವಂತೆ ಕಾಣುತ್ತಿದೆ. ಇದು ನಾಗ ಚೈತನ್ಯ ಜೊತೆ ಹೊಂದಾಣಿಕೆಯಾಗುವ ಟ್ಯಾಟೂ ಆಗಿತ್ತು. ಇದರ ಅರ್ಥ ‘ನಿಮ್ಮ ಸ್ವಂತ ವಾಸ್ತವವನ್ನು ರಚಿಸಿ’ ಎಂದಾಗಿತ್ತು” ಎಂದು ಬರೆಯಲಾಗಿದೆ.
ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ವಿವಿಧ ಪ್ರತಿಕ್ರಿಯೆಗಳನ್ನು ಪಡೆದಿದೆ. ಒಬ್ಬ ಬಳಕೆದಾರರು, “ಒಳ್ಳೆಯದು. ಸಂಗಾತಿಯ ಹೆಸರನ್ನು ಎಂದಿಗೂ ಹಚ್ಚೆ ಹಾಕಿಸಿಕೊಳ್ಳಬೇಡಿ ಹುಡುಗರೇ… ಸಂಬಂಧ ಯಾವಾಗ ಕೊನೆಗೊಳ್ಳುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ, ಮತ್ತು ಹಚ್ಚೆ ತೆಗೆಯುವುದು ನೋವಿನ ವಿಷಯ…” ಎಂದು ಕಾಮೆಂಟ್ ಮಾಡಿದ್ದಾರೆ.