ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವಕ-ಯುವತಿಯೊಬ್ಬರು ಅಶ್ಲೀಲವಾಗಿ ವರ್ತಿಸಿದ್ದು ಭಾರೀ ಟೀಕೆ ವ್ಯಕ್ತವಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ ನಂಬರ್ 3ರಲ್ಲಿ ಈ ಘಟನೆ ನಡೆದಿದೆ. ವೀಡಿಯೊದಲ್ಲಿ, ಯುವಕನೊಬ್ಬ ಸಾರ್ವಜನಿಕವಾಗಿ ಯುವತಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸುವುದನ್ನು ಕಾಣಬಹುದು. ಈ ದೃಶ್ಯವನ್ನು ಒಬ್ಬ ಪ್ರಯಾಣಿಕ ಮೊಬೈಲ್ ಕ್ಯಾಮರಾದಲ್ಲಿ ಧೃಡೀಕರಿಸಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಈ ಸಂಬಂಧವಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ಸಿಸಿಟಿವಿ ಫುಟೇಜ್ ಪರಿಶೀಲಿಸುತ್ತಿದ್ದಾರೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಈ ಘಟನೆಯ ದಾಖಲೆ ಸಿಸಿ ಕ್ಯಾಮೆರಾಗಳಲ್ಲಿ ಕಂಡುಬಂದಿಲ್ಲ. ಇದರ ನಂತರ, ಸಿಬ್ಬಂದಿ ಕಳೆದ 2-3 ದಿನಗಳ ಫುಟೇಜ್ ಪರಿಶೀಲಿಸುತ್ತಿದ್ದಾರೆ. ಜೊತೆಗೆ, ಮೆಟ್ರೋ ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲು ಮುಂದಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯ ಬಗ್ಗೆ ತೀವ್ರ ಟೀಕೆಗಳು ಬಂದಿವೆ. ಬಳಕೆದಾರರು, “ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಭ್ಯ ವರ್ತನೆ ಸಹನೀಯವಲ್ಲ. ಇಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಸಂಚರಿಸುವುದರಿಂದ, ಇದು ಕೇವಲ ಮುಜುಗರವಲ್ಲ, ಗಂಭೀರ ಅಗೌರವ” ಎಂದು ಟೀಕಿಸಿದ್ದಾರೆ. ಅಲ್ಲದೇ, ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದು ದುರಾದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ನಂತರ, ಮೆಟ್ರೋ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಬಿಎಂಆರ್ಸಿಎಲ್ ಅಧಿಕಾರಿಗಳು ತಕ್ಷಣ ನಡೆವಳಿಕೆ ಕೈಗೊಳ್ಳುವುದಾಗಿ ಹೇಳಿದ್ದಾರೆ.