Priyank Kharge : ರಾಜ್ಯ ಸರ್ಕಾರದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರ ವಿದ್ಯಾರ್ಹತೆ ವಿಚಾರ ಮತ್ತೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ಹೌದು, ಹಿಂದೆ ಪ್ರಿಯಾಂಕ್ ಖರ್ಗೆಯವರು ಡಿಜಿಟಲ್ ಅನಿಮೇಷನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅದನ್ನು ಈಗ ಡಿಗ್ರಿ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು. ನ್ಯಾಷನಲ್ ಲಾ ಸ್ಕೂಲ್‌ನಲ್ಲಿ 13ನೇ ರ್ಯಾಂಕ್ ಪಡೆದಿದ್ದಾಗಿ ಹಾಗೂ ಸ್ಕಾಟ್ಲೆಂಡ್ ರೆಫರೆಂಡಮ್ ಅಧ್ಯಯನಕ್ಕೆ ಆಯ್ಕೆಯಾದ ನಾಲ್ವರಲ್ಲಿ ತಾನೂ ಒಬ್ಬನಾಗಿದ್ದಾಗಿ ಹೇಳಿಕೊಂಡಿದ್ದರು.
ಚುನಾವಣಾ ವೆಬ್‌ಸೈಟ್ ಪ್ರಕಾರ, ಅವರು ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದಿದ್ದು, 1999ರಲ್ಲಿ ಕಂಪ್ಯೂಟರ್ ಆರ್ಟ್ಸ್ ಮತ್ತು ಅನಿಮೇಷನ್‌ನಲ್ಲಿ ವೃತ್ತಿಪರ ಪ್ರಮಾಣಪತ್ರ ಪಡೆದಿದ್ದಾರೆ.
ಪ್ರಿಯಾಂಕ್ ಖರ್ಗೆ ವಿದ್ಯಾರ್ಹತೆ ಬಗ್ಗೆ ಬಿಜೆಪಿಯಿಂದ ಗಂಭೀರ ಆರೋಪ
ಸದ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿದ್ಯಾರ್ಹತೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, 2023ರ ವಿಧಾನಸಭೆ ಚುನಾವಣೆಯ ವೇಳೆ ಚರ್ಚೆಯಾಗಿದ್ದ ಈ ವಿಷಯವನ್ನು ಕರ್ನಾಟಕ ಬಿಜೆಪಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ವ್ಯಂಗ್ಯವಾಡಿದೆ. ಪಿಯುಸಿ ನಂತರ ಪ್ರಿಯಾಂಕ್ ಖರ್ಗೆ SSLC ಸೇರುತ್ತಾರೆ ಎಂದು ಬಿಜೆಪಿ ಹೇಳಿದೆ. ಚುನಾವಣಾ ಅಫಿಡವಿಟ್ ಪ್ರಕಾರ, ಪ್ರಿಯಾಂಕ್ ಖರ್ಗೆ ಪ್ರಥಮ ಪಿಯುಸಿ ಓದಿದ್ದು, ನಂತರ ಕಂಪ್ಯೂಟರ್ ಆರ್ಟ್ಸ್ ಮತ್ತು ಅನಿಮೇಷನ್‌ನಲ್ಲಿ ವೃತ್ತಿಪರ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಪ್ರಿಯಾಂಕ್ ಖರ್ಗೆ ವಿದ್ಯಾರ್ಹತೆ ಗೊಂದಲ: ನೆಟ್ಟಿಗರ ಟ್ರೋಲ್‌ಗೆ ಗುರಿಯಾದ ಸಚಿವ
ಇನ್ನು, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ವಿದ್ಯಾರ್ಹತೆಯ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. 2023ರ ಚುನಾವಣಾ ಅಫಿಡವಿಟ್‌ನಲ್ಲಿ ’10ನೇ ತರಗತಿ ಉತ್ತೀರ್ಣ’ ಎಂದು ಘೋಷಿಸಿಕೊಂಡಿದ್ದರೆ, ಹಿಂದಿನ ಅಫಿಡವಿಟ್‌ಗಳಲ್ಲಿ ಪಿಯುಸಿ ಎಂದು ಉಲ್ಲೇಖಿಸಿದ್ದರು. ಈ ವ್ಯತ್ಯಾಸದಿಂದಾಗಿ ನೆಟ್ಟಿಗರು ಅವರ ವಿದ್ಯಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಮತ್ತು ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ಸಚಿವರು ಇನ್ನೂ ಸ್ಪಷ್ಟನೆ ನೀಡಿಲ್ಲ.




