ಬಳ್ಳಾರಿ,ಫೆ.11: ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಕಸವನ್ನು ಒಣ ಮತ್ತು ಹಸಿಕಸ ಎಂದು ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡುವುದರ ಮೂಲಕ ಪೌರಕಾರ್ಮಿಕರಿಗೆ ಮತ್ತು ಮಹಾನಗ ಪಾಲಿಕೆಗೆ ಸಹಕರಿಸಬೇಕು. ಈ ರೀತಿಯ ಕಸ ವಿಂಗಡಿಸಿ ನೀಡುವುದರಿಂದ ಕಸದ ಪುನರ್ ಬಳಕೆಗೆ ಸಹಾಯಕವಾಗುತ್ತದೆ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಹೇಳಿದರು.
ನಗರದ ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸ್ವಚ್ಚ ಬಳ್ಳಾರಿ ಅಭಿಯಾನದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಸ ವಿಲೇವಾರಿ ಮಾಡುವುದರಿಂದ ತುಂಬಾ ಅನುಕೂಲವಾಗುತ್ತದೆ. ಹಸಿಕಸವನ್ನು ಕಾಂಪೋಸ್ಟ್ ಪಿಟ್‍ನಲ್ಲಿ ಹಾಕಿ ಅದರಿಂದ ಗೊಬ್ಬರವನ್ನು ತಯಾರಿಸಿ ಅವರ ಕಾಲೋನಿಯಲ್ಲಿನ ಪಾರ್ಕ್‍ಗಳಲ್ಲಿ ಆ ಗೊಬ್ಬರವನ್ನು ಉಪಯೋಗಿಸಲಾಗುತ್ತದೆ. ಈ ಕಸ ವಿಲೇವಾರಿ ಮಾಡಲು ಜನರಿಗೆ ಮಾಹಿತಿಗಾಗಿ, ತರಬೇತಿಗೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ನೋಪಾಸನಾ ಸಂಸ್ಥೆಗೆ ವಹಿಸಲಾಗಿದೆ ಎಂದರು.
ಈ ಯೋಜನೆಗೆ ಬೇಕಾಗಿರುವ ಜೆ.ಸಿ.ಬಿ ಹಾಗೂ ಇನ್ನೀತರ ಪರಿಕರಗಳನ್ನು ಮಹಾನಗರಪಾಲಿಕೆ ವತಿಯಿಂದ ನೀಡಲಾಗುತ್ತದೆ. ಯೋಜನೆ ಕಾರ್ಯರೂಪಕ್ಕೆ ಬಂದ 6 ತಿಂಗಳ ನಂತರ ಯಾವ ಕಾಲೋನಿಯ ಜನರು ಹಸಿಕಸದಿಂದ ಗೊಬ್ಬರವನ್ನು ತಯಾರಿಸಿಕೊಂಡು ಅವರ ಕಾಲೋನಿಯನ್ನು ಸ್ವಚ್ವವಾಗಿ ಇಟ್ಟುಕೊಳ್ಳುತ್ತಾರೋ ಅವರಿಗೆ ಬಹುಮಾನ ಮತ್ತು ಪ್ರಶಂಸನ ಪತ್ರ ನೀಡಲಾಗುವುದು ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ ಮಹಾನಗರಪಾಲಿಕೆಯ ವತಿಯಿಂದ ಕಸವಿಲೇವಾರಿ ವಾಹನ ಬಂದಾಗ ಹಸಿಕಸ ಮತ್ತು ಒಣಕಸ ಬೇರೆ ಬೇರೆ ಮಾಡಿ ಕಸಕೊಡಿ. ಇದರಿಂದ ಮಹಾನಗರಪಾಲಿಕೆಗೆ ಘನ ತ್ಯಾಜ್ಯ ವಿಲೆವಾರಿ ಮಾಡಲು ಮತ್ತು ಬಳ್ಳಾರಿ ನಗರವನ್ನು ಸ್ವಚ್ಚ ಮಾಡಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು. ಈ ಸಭೆಯಲ್ಲಿ ನೋಪಸನ ಸಂಸ್ಥೆಯ ನಿರ್ದೇಶಕ ಎಂ.ಎ.ಷಕೀಬ್ ಅವರು ಸ್ವಚ್ಛ ಬಳ್ಳಾರಿ ಅಭಿಯಾನಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ನಗರದ ಡಿ.ಆರ್.ಪೋಲೀಸ್ ಕಾಲೋನಿ, ಬಿ.ಎಸ್.ಎನ್.ಎಲ್, ಎಲ್.ಐ.ಸಿ, ಎನ್.ಈ.ಕೆ.ಎಸ್.ಆರ್.ಟಿ,ಸಿ. ಅರಣ್ಯ ಇಲಾಖೆ, ನೀರಾವರಿ ಇಲಾಖೆ, ಅಂಚೆ ಇಲಾಖೆ, ಲೋಕೋಪಯೋಗಿ ಇಲಾಖೆ, ತುಂಗಭದ್ರ ಬೋರ್ಡ್, ವಿಮ್ಸ್ ಕಾಲೋನಿ, ಮಣ್ಣಿನ ಸಂರಕ್ಷಣೆ ಇಲಾಖೆ, ಹಾಗೂ ಸರ್ಕಾರಿಯ ವಸತಿ ಕಾಲೋನಿಗಳ ಅಧಿಕಾರಿಗಳು ಇದ್ದರು.