ಚಿಕ್ಕಬಳ್ಳಾಪುರ: ಶಿಕ್ಷಕಿಯೋರ್ವರ ಎಡವಟ್ಟಿನಿಂದ ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನ ಕಣ್ಣು ಕಳೆದುಕೊಂಡ ದುರ್ಘಟನೆಯ ನಂತರ, ಪೋಷಕರು ಶುಕ್ರವಾರ(ಏ.4) ಚಿಂತಾಮಣಿ ನಗರದಲ್ಲಿ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣೆ ಕೂತಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಯಗವಕೋಟೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶ್ವಂತ್ (8) ಓದುತ್ತಿದ್ದ. ಶಿಕ್ಷಕಿ ಸರಸ್ವತಿ ಇನ್ನೊಬ್ಬ ವಿದ್ಯಾರ್ಥಿಗೆ ಹೊಡೆಯಲು ಉಪಯೋಗಿಸಿದ ಕೋಲು ಯಶ್ವಂತ್ನ ಬಲ ಕಣ್ಣಿಗೆ ಬಡಿದು ಗಂಭೀರ ಗಾಯವಾಗಿತ್ತು. ತಕ್ಷಣ ಪೋಷಕರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ವೈದ್ಯರು ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೋಗಿದೆ ಎಂದು ದೃಢಪಡಿಸಿದರು.
ಘಟನೆಯ ನಂತರ, ಪೋಷಕರು ಶಿಕ್ಷಕಿಯ ವಿರುದ್ಧ ಪೊಲೀಸ್ ಠಾಣೆ ಮತ್ತು ಶಿಕ್ಷಣಾಧಿಕಾರಿಗಳ ಬಳಿಗೆ ದೂರು ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಕಾರಣ, ಯಶ್ವಂತ್ನ ತಂದೆ-ತಾಯಿಗಳು ನ್ಯಾಯಕ್ಕಾಗಿ ಆಗ್ರಹಿಸಿ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣೆ ಕೂತಿದ್ದಾರೆ.
“ಶಿಕ್ಷಕಿಯ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವವರೆಗೂ ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ,” ಎಂದು ಪೋಷಕರು ಹೇಳಿದ್ದಾರೆ. ಈ ಘಟನೆಯಿಂದ ತಾಲ್ಲೂಕಿನಲ್ಲಿ ಶಿಕ್ಷಕಿ ವಿರುದ್ಧ ಆಕ್ರೋಶ ಹೆಚ್ಚಾಗಿದೆ.