ಬೆಂಗಳೂರು: 2ಎ ಮೀಸಲಾತಿಗಾಗಿ ಬೃಹತ್ ಪಾದಯಾತ್ರೆ ನಡೆಸಿದ ಪಂಚಮಸಾಲಿ ಸಮುದಾಯ ತಮ್ಮ ಬೇಡಿಕೆ ಈಡೇರುವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದೆ.
ಆದರೆ ಸಮುದಾಯದ ಹೋರಾಟವನ್ನು ಹಾದಿ ತಪ್ಪಿಸಲು ಹುನ್ನಾರ ನಡೆಯುತ್ತಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ.
ಪಂಚಮಸಾಲಿಗರಿಗೆ ೨ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ ಮೊದಲು ಉಪವಾಸ ಸತ್ಯಗ್ರಹ ಕೈಗೊಂಡು ಸರ್ಕಾರಕ್ಕೆ ಗಡುವು ನೀಡಿದ್ದರು. ನಂತರ ಬೇಡಿಕೆ ಈಡೇರಿಕೆಗಾಗಿ ಕೂಡಲಸಂಗಮದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಮೂಲಕ ತೀವ್ರ ಹೋರಾಟ ನಡೆಸಿದರು. ನಾವು ಮೀಸಲಾತಿಯ ಆದೇಶ ಪತ್ರ ಪಡೆದೇ ವಾಪಸ್ ತೆರಳುವುದು ಎಂದು ಘೋಷಣೆ ಮಾಡಿ ಹೋರಾಟ ಮುಂದುವರಿಸಿದ್ದರು.
ಇದಕ್ಕೆ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್ ಸೇರಿ ಹಲವು ಮುಖಂಡರು ಸಾಥ್ ನೀಡಿದ್ದರು. ಪಾದಯಾತ್ರೆ ಬೆಂಗಳೂರು ತಲುಪಿ ಬೃಹತ್ ಸಮಾವೇಶ ಕೂಡ ನಡೆಯಿತು. ಇದು ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಯಿತು. ಈ ಕಾರಣಕ್ಕೆ ಹೋರಾಟದ ಹಾದಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಯತ್ನಾಳ್ ಗೆ ಬಿಜೆಪಿ ಎಚ್ಚರಿಕೆ
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿಸಿಯೇ ಸಿದ್ಧವೆಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ವಿರುದ್ಧ ತೊಡೆತಟ್ಟಿ ನಿಂತಿದ್ದ ಬಸವವಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಎಚ್ಚರಿಕೆ ನೀಡಿದೆ. ಯತ್ನಾಳ್‌ಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಪಕ್ಷದ ಶಿಸ್ತು ಕಾಪಾಡುವಂತೆ ಯತ್ನಾಳ್ ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಹಿಂದೆ ಸರಿದ ಹರಿಹರ ಸ್ವಾಮೀಜಿ
ಪಾದಯಾತ್ರೆ ಯಶಸ್ಸಿಗೆ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಸಾಥ್ ನೀಡಿದ್ದ ವಚನಾನಂದ ಸ್ವಾಮೀಜಿ ಕೊನೆ ಘಳಿಗೆಯಲ್ಲಿ ಹಿಂದೆ ಸರಿದಿದ್ದಾರೆ. ಪಾದಯಾತ್ರೆ ರಾಜಕೀಯ ಬಣ್ಣ ಪಡೆದಿದೆ ಎಂಬ ಕಾರಣಕ್ಕೆ ನಾನು ಹಿಂದೆ ಸರಿದಿದ್ದೇನೆ.
ಪಂಚಮಸಾಲಿಗರಿಗೆ ಮೀಸಲು ಸೌಲಭ್ಯ ಕೊಡಿಸುವ ಹೋರಾಟಕ್ಕೆ ತಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನೂ ಕೆಲ ಬೆಳವಣಿಗೆಗಳು ನಡೆದಿದ್ದು, ತೀವ್ರ ಸ್ವರೂಪ ಪಡೆದಿದ್ದ ಸಮುದಾಯದ ಹೋರಾಟವನ್ನು ಹಾದಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂಬ ಮಾತುಗಳು ಜನ ಸಾಮಾನ್ಯರಲ್ಲಿ ಕೇಳಿಬರುತ್ತಿವೆ.