ಬೆಂಗಳೂರು: ಬಿಟ್‌ಕಾಯಿನ್ ಪಾವತಿಗಳ ವಿನಿಮಯವಾಗಿ ಪಾಕಿಸ್ತಾನಕ್ಕೆ ರಕ್ಷಣಾ ಸಂಬಂಧಿತ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಎಂಜಿನಿಯರ್ ಒಬ್ಬರನ್ನು ಕೇಂದ್ರ, ರಾಜ್ಯ ಮತ್ತು ರಕ್ಷಣಾ ಗುಪ್ತಚರ ಸಂಸ್ಥೆಗಳ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನ 36 ವರ್ಷದ ಆರೋಪಿ ದೀಪರಾಜ್ ಚಂದ್ರನ್, ಬಿಇಎಲ್‌ನ ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರದಲ್ಲಿ (ಪಿಡಿಐಸಿ) ಹಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಚಂದ್ರನ್ ಉತ್ಪಾದನಾ ವ್ಯವಸ್ಥೆಗಳು, ಕಚೇರಿ ವಿನ್ಯಾಸಗಳು ಮತ್ತು ಹಿರಿಯ ಅಧಿಕಾರಿಗಳ ವಿವರಗಳಂತಹ ನಿರ್ಣಾಯಕ ರಕ್ಷಣಾ ಸಂಬಂಧಿತ ಮಾಹಿತಿಯನ್ನು ಪಾಕಿಸ್ತಾನಿ ಕಾರ್ಯಕರ್ತರಿಗೆ ಸೋರಿಕೆ ಮಾಡಿದ ಎಂದು ತಿಳಿದು ಬಂದಿದೆ.
ಪಾಕಿಸ್ತಾನದಲ್ಲಿರುವ ತನ್ನ ಏಜೆಂಟ್‌ಗಳೊಂದಿಗೆ ಸಂಪರ್ಕ ಹೊಂದಲು ಚಂದ್ರನ್ ಆನ್ಲೈನ್ ಆಪ್ಲಿಕೇಶನ್ ಸೇರಿದಂತೆ ಇತರೆ ಮಾರ್ಗಗಳನ್ನು ಬಳಸಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಶಂಕಿಸಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರೋಪಿ, ಚಂದ್ರನ್ ಇಮೇಲ್ ಟೆಲಿಗ್ರಾಂ ಮತ್ತು ಇಂಟರ್ನೆಟ್ ಕರೆಗಳ ಮೂಲಕ ಮಾಹಿತಿ ರವಾನಿಸಿದ್ದಾನೆ ಎಂದು ತಿಳಿದು ಬಂದಿದೆ.
ಚಂದ್ರನ್ ದೀರ್ಘಕಾಲದವರೆಗೆ ರಕ್ಷಣಾ ಸಂಬಂಧಿತ ಮಾಹಿತಿಯನ್ನು ಸೋರಿಕೆ ಮಾಡುತ್ತಿರಬಹುದು ಎಂದು ಅಧಿಕಾರಿಗಳು ಶಂಕಿಸುತ್ತಿದ್ದಾರೆ, ಇದು ರಾಷ್ಟ್ರೀಯ ಭದ್ರತಾ ಉಲ್ಲಂಘನೆಯ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ.