Menstrual leave : ಕರ್ನಾಟಕ ರಾಜ್ಯವು ಮಹಿಳಾ ನೌಕರರ ಆರೋಗ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ, ಕರ್ನಾಟಕ ಸರ್ಕಾರವು “ವೇತನ ಸಹಿತ ಋತುಚಕ್ರ (Menstrual leave) ರಜೆ” ನೀತಿಗೆ ಸಂಪುಟದ ಅನುಮೋದನೆ ನೀಡಿದೆ. ಈ ನೀತಿಯ ಅಡಿಯಲ್ಲಿ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒ೦ದು ದಿನದ ವೇತನ ಸಹಿತ ರಜೆ ಸಿಗಲಿದೆ.
ಯಾವ ವಲಯಗಳಿಗೆ ಅನ್ವಯ
ಈ ಋತುಚಕ್ರ ರಜೆ ನೀತಿ ಸರ್ಕಾರದ ಕಚೇರಿಗಳಿಗಷ್ಟೇ ಸೀಮಿತವಾಗಿಲ್ಲ. ಐಟಿ ಕಂಪನಿಗಳು, ಎ೦ಎನ್‌ಸಿಗಳು, ಗಾರ್ಮೆಂಟ್ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಖಾಸಗಿ ವಲಯಗಳು ಸೇರಿ ಎಲ್ಲಾ ಉದ್ಯೋಗದಾತರು ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾಗಿದೆ. ಮಹಿಳೆಯರ ಕೆಲಸದ ಪರಿಸರದಲ್ಲಿ ಸಹಾನುಭೂತಿಯುಳ್ಳ, ಆರೋಗ್ಯಕರ ಬದಲಾವಣೆಯು ಮೂಡಿಸಲು ಈ ಕ್ರಮ ಮಹತ್ವದ್ದಾಗಿದೆ.
ಸರ್ಕಾರದ ಸ್ಪಷ್ಟ ನಿಲುವು
ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು, “ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆಯನ್ನು ನೀಡುವ ‘ಋತುಚಕ್ರ ರಜೆ’ ನೀತಿಗೆ ಸಂಪುಟ ಒಪ್ಪಿಗೆ ನೀಡಿದೆ,” ಎ೦ದು ತಿಳಿಸಿದರು. ಇದೇ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಈ ನೀತಿಗೆ ಆಡಳಿತಾತ್ಮಕ ಅನುಮೋದನೆ ಈಗಾಗಲೇ ಕೋರಲಾಗಿತ್ತು ಎ೦ದು ತಿಳಿಸಿದ್ದಾರೆ.
ಇತರ ರಾಜ್ಯಗಳಿಗಿಂತ ಮುಂದೆ ಕರ್ನಾಟಕ
ಇದಕ್ಕೂ ಮೊದಲು ಕೇರಳ, ಬಿಹಾರ, ಮತ್ತು ಒಡಿಶಾ ರಾಜ್ಯಗಳು ಸೀಮಿತ ಮಟ್ಟದಲ್ಲಿ ಇ೦ತಹ ರಜೆ ವ್ಯವಸ್ಥೆಗಳನ್ನು ಜಾರಿಗೊಳಿಸಿದ್ದವು. ಕೇರಳದಲ್ಲಿ ಐಟಿಐಗಳಲ್ಲಿ ಮಹಿಳಾ ತರಬೇತಿದಾರರಿಗೆ ಎರಡು ದಿನದ ಋತುಚಕ್ರ ರಜೆ ಸೌಲಭ್ಯವಿದೆ. ಬಿಹಾರ & ಒಡಿಶಾದಲ್ಲಿ ಸರ್ಕಾರಿ ನೌಕರರಿಗೆ ಮಾತ್ರ ವರ್ಷಕ್ಕೆ 12 ದಿನಗಳ ರಜೆ ಇದೆ. ಆದರೆ ಕರ್ನಾಟಕವು ಈ ನೀತಿಯನ್ನು ಎಲ್ಲ ವಲಯಗಳಲ್ಲಿ ಸಮಗ್ರವಾಗಿ ಜಾರಿಗೆ ತರಲಿರುವ ಭಾರತದ ಮೊದಲ ರಾಜ್ಯ ಆಗಲಿದೆ.
ಮಹಿಳಾ ಸಬಲೀಕರಣದತ್ತ ಪ್ರಗತಿಪರ ಹೆಜ್ಜೆ
ಈ ನಿರ್ಧಾರವು ಮಹಿಳೆಯರ ಶಾರೀರಿಕ ತೊಂದರೆ & ಸಾಮಾಜಿಕ ನಿರ್ಬ೦ಧಗಳನ್ನು ಅರಿತು, ಅವರಿಗೆ ಸಹಾನುಭೂತಿಯುತ ಉದ್ಯೋಗ ಪರಿಸರ ಒದಗಿಸಲು ರಾಜ್ಯ ಸರ್ಕಾರ ಕೈಗೊಂಡ ದಿಟ್ಟ ಕ್ರಮವಾಗಿದೆ. ಇದು ಕೇವಲ ಒಂದು ರಜೆ ನೀತಿಯಷ್ಟೇ ಅಲ್ಲ, ಮಹಿಳೆಯರ ಗೌರವ ಮತ್ತು ಸಬಲೀಕರಣದ ಸಂಕೇತವಾಗಿದೆ. ಮಹಿಳೆಯರ ಆರೋಗ್ಯ, ಆತ್ಮವಿಶ್ವಾಸ & ಕೆಲಸದ ಉತ್ಪಾದಕತೆ ಹೆಚ್ಚಿಸಲು ಇದು ಹೊಸ ದಾರಿಯಾಗಿದೆ.




