ಬೆಂಗಳೂರು: ನಮ್ಮ ಪಕ್ಷ ತೀರ್ಮಾನ ಮಾಡಿದೆ, ನಾನೇ ಬಹುತೇಕ ಸಭಾಪತಿ ಅಭ್ಯರ್ಥಿ ಆಗುತ್ತೇನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಬಸವರಾಜ್ ಹೊರಟ್ಟಿ ಅವರು, ಕಾರ್ಯ ಕಲಾಪ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಬೇಕಿದ್ದು, ಜೊತೆಗೆ ಸಭಾಪತಿ ಚುನಾವಣೆ ಪ್ರಕ್ರಿಯೆ ಕೂಡ ನಡೆಯಬೇಕಿದೆ. ಹೀಗಾಗಿ ಮೂರೂ ದಿನಗಳ ಕಾಲ ಕಲಾಪ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ನಾನೆ ಬಹುತೇಕ ಸಭಾಪತಿ ಅಭ್ಯರ್ಥಿಯಾಗಿದ್ದು, ನಮ್ಮ ಪಕ್ಷ ಕೂಡ ತೀರ್ಮಾನ ಮಾಡಿದೆ ಎಂದು ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ. ಇನ್ನು ಗೋಹತ್ಯೆ ನಿಷೇಧದ ವಿಚಾರದಲ್ಲಿ ಪಕ್ಷದ ತೀರ್ಮಾನದ ಬಗ್ಗೆ ನನಗೆ ಗೊತ್ತಿಲ್ಲ, ನಮ್ಮ ನಾಯಕರ ಜೊತೆ ಚರ್ಚಿಸಿ ಹೇಳುತ್ತೇನೆ ಎಂದು ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪ ಸಲಹಾ ಸಮಿತಿ ಸಭೆ ಉಪ ಸಭಾಪತಿ ಎಂ ಕೆ ಪ್ರಾಣೇಶ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಸವರಾಜ್ ಹೊರಟ್ಟಿ ಸೇರಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೋಟಾ ಶ್ರೀನಿವಾಸ್ ಪೂಜಾರಿ, ಬಿ ಕೆ ಹರಿಪ್ರಸಾದ್, ಎಂ ನಾರಾಯಣ ಸ್ವಾಮಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.