ಬೆಂಗಳೂರು: ಕನ್ನಡಿಗರ ಸ್ವಾಭಿಮಾನದ ಅಲೆ ಸುನಾಮಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ ಎಂದು ಗೂಗಲ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಹೌದು, ಗೂಗಲ್ ಸರ್ಚ್ ಎಂಜಿನ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂಬ ಉತ್ತರ ತೋರಿಸುತ್ತಿತ್ತು. ಇದಕ್ಕೆ ಗೂಗಲ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು, ಪರಿಣಾಮ ಗೂಗಲ್ debtconsolidationsquad.com ವೆಬ್ ಪುಟ ನಿಷ್ಕ್ರಿಯಗೊಳಿಸಿತ್ತು.
ಸದ್ಯ ಭಾರತದ ಕೆಟ್ಟ ಭಾಷೆ ಯಾವುದು ಎಂದು ಹುಡುಕಿದಾಗ ಭಾರತದಲ್ಲಿ ಯಾವುದೇ ಕೆಟ್ಟ ಭಾಷೆಗಳಿಲ್ಲ. ಎಲ್ಲಾ ಭಾಷೆಗಳಿಗೂ ತನ್ನದೇ ಆದ ಗೌರವವಿದೆ. ಕನ್ನಡ ಕರ್ನಾಟಕದ ಹೆಮ್ಮೆ. ಗೂಗಲ್ ಕನ್ನಡ ಕಲಿಯ ಬಯಸುತ್ತದೆ ಎಂದು ತೋರಿಸುತ್ತಿದೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಕನ್ನಡ ಭಾಷೆಯ ಕುರಿತು ತಪ್ಪು ಮಾಹಿತಿ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಎಂದು ಸರ್ಚ್ ಇಂಜನ್ ದೈತ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಈ ಪ್ರಮಾದ ಒಪ್ಪುವಂಥದ್ದಲ್ಲ, ಕನ್ನಡದ ವಿಚಾರದಲ್ಲಿ ಎಲ್ಲರೂ ಎರಡು ಪಟ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕು, ಇಲ್ಲವಾದರೆ, ಒಂದೇ ಗಂಟೆಯಲ್ಲಿ ಸೃಷ್ಟಿಯಾದ ಕನ್ನಡಿಗರ ಸ್ವಾಭಿಮಾನದ ಅಲೆ, ಮರುಗಳಿಗೆಯಲ್ಲಿ ಸುನಾಮಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ ಎಂದು ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.