ಸ್ವಯಂಘೋಷಿತ ಆಧ್ಯಾತ್ಮಿಕ ಗುರು, ಅತ್ಯಾಚಾರ ಪ್ರಕರಣದ ಆರೋಪಿ ನಿತ್ಯಾನಂದ ಸ್ವಾಮಿಜಿಯ ಅರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ದೊರೆತಿದ್ದು, ತುರ್ತು ಅರೋಗ್ಯ ಸಹಾಯ ಒದಗಿಸಲು ಕೋರಿ ನಿತ್ಯಾನಂದ ಶ್ರೀಲಂಕಾದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾನೆ ಎಂದು ವರದಿಯಾಗಿದೆ.
ಪ್ರಸ್ತುತ ಆಸ್ಟ್ರೇಲಿಯಾ ಸಮೀಪ ಕೈಲಾಸ ಎಂಬ ತನ್ನದೇ ದ್ವೀಪ ರಾಷ್ಟ್ರವನ್ನು ಸ್ಥಾಪಿಸಿ ನೆಲೆಸಿರುವ ನಿತ್ಯಾನಂದನಿಗೆ ಅಲ್ಲಿ ವೈದ್ಯಕೀಯ ವ್ಯವಸ್ಥೆಗಳ ಕೊರತೆ ಉಂಟಾಗಿದೆಯಂತೆ. ಹಾಗಾಗಿ, ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಿ ಜೀವ ಕಾಪಾಡುವಂತೆ ಶ್ರೀಲಂಕಾ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಕೋರಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಿತ್ಯಾನಂದ ಭಾರತಕ್ಕೆ ಬಂದರೆ ಅರೆಸ್ಟ್ ಆಗುವ ಸಾಧ್ಯತೆ ಇದ್ದು, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಆತನ ವಿರುದ್ಧ ರಾಮನಗರ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿದೆ.