ಕಾರವಾರ: ಕದಂಬ ನೌಕಾನೆಲೆ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರರಿಗೆ ನೀಡಿರುವ ಆರೋಪದಡಿ ಮಂಗಳವಾರ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ(ಎನ್ಐಎ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಂಕೋಲಾ ತಾಲೂಕಿನ ಅಕ್ಷಯ ನಾಯ್ಕ ಹಾಗೂ ಕಾರವಾರ ತಾಲೂಕಿನ ಮುದಗಾದ ವೇತನ ತಾಂಡೇಲ ಬಂಧಿತರು.
ಸೋಮವಾರವೇ ಕಾರವಾರದಲ್ಲಿ ಬೀಡು ಬಿಟ್ಟಿದ್ದ ಹೈದರಾಬಾದಿನಿಂದ ಬಂದ ಎನ್ಐಎ ಅಧಿಕಾರಿಗಳ ತಂಡವು ರಾತ್ರಿವರೆಗೂ ನಗರ ಪೊಲೀಸ್ ಠಾಣೆಯಲ್ಲಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಬಳಿಕ ಕಾರವಾರದಲ್ಲಿಯೇ ತಂಗಿದ್ದ ಅವರು ಮಂಗಳವಾರ ನಸುಕಿನ ಜಾವದಲ್ಲಿ ಪ್ರತ್ಯೇಕ ತಂಡ ರಚಿಸಿ ಎರಡು ಕಡೆ ದಾಳಿ ನಡೆಸಿದ್ದಾರೆ.
ಅಂಕೋಲಾದಲ್ಲಿ ವಶಕ್ಕೆ ಪಡೆದ ಅಕ್ಷಯ ನಾಯ್ಕನನ್ನು ಅಲ್ಲಿಯ ಪೊಲೀಸ್ ಠಾಣೆಯಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ. ಕಾರವಾರಕ್ಕೆ ತಂದ ಇನ್ನೋರ್ವ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ 2024ರ ಅಗಸ್ಟ್ ತಿಂಗಳಲ್ಲಿ ಹನಿಟ್ರ್ಯಾಪ್ ಗೆ ಒಳಗಾದ ಆರೋಪಿಗಳು ನೌಕಾನೆಲೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದಡಿ ಬಂದಿತ ಆರೋಪಿಗಳು ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಬಳಿಕ ನೋಟೀಸ್ ನೀಡಿ ಬಿಡಲಾಗಿತ್ತು. ಇದೀಗ ಇದೇ ಪ್ರಕರಣವಾಗಿ ಮುಂದುವರೆದ ತನಿಖೆಯ ಭಾಗವಾಗಿ ಇಬ್ಬರನ್ನು ಬಂಧಿಸಿ ಕ್ರಮಕ್ಕೆ ಮುಂದಾಗಿದ್ದಾರೆ.