Navratri 2025 Day 4 | ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆ ನಡೆಯುತ್ತದೆ. ಈ ದೇವಿಯನ್ನು ಅಷ್ಟಭುಜಾದೇವಿ ಎಂದೂ ಕರೆಯುತ್ತಾರೆ. ಎಂಟು ಭುಜಗಳನ್ನು ಹೊಂದಿರುವ ದೇವಿಯು ತನ್ನ ಏಳು ಕೈಗಳಲ್ಲಿ ಬಿಲ್ಲು, ಮಕರಂದ, ಬಾಣ, ಕಮಲ, ರಾಜದಂಡ, ಚಕ್ರ ಹಿಡಿದಿದ್ದು, ಎಂಟನೆಯ ಕೈಯಲ್ಲಿ ಭಕ್ತರಿಗೆ ವರವನ್ನು ನೀಡುತ್ತಾಳೆ. ಸಿಂಹದ ಮೇಲೆ ಸವಾರಿ ಮಾಡುವ ಈ ದೇವಿಯನ್ನು ಪೂಜಿಸುವುದರಿಂದ ಋಣ, ದಾರಿದ್ರ್ಯ, ರೋಗ, ಶೋಕಗಳು ದೂರವಾಗುತ್ತವೆ ಮತ್ತು ಆಯುಷ್ಯ, ಯಶಸ್ಸು, ಬಲ ಮತ್ತು ಆರೋಗ್ಯದ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ನವರಾತ್ರಿಯ ನಾಲ್ಕನೇ ದಿನ: ವಿಶ್ವವನ್ನೇ ಸೃಷ್ಟಿಸಿದ ಕೂಷ್ಮಾಂಡಾ ದೇವಿಯ ಕಥೆ

ನವರಾತ್ರಿಯ ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡಾ ದೇವಿಯನ್ನು ಆದಿಶಕ್ತಿಯೆಂದು ಕರೆಯಲಾಗುತ್ತದೆ. ಏಕೆಂದರೆ ಭೂಮಿಯ ಸೃಷ್ಟಿಕರ್ತೆಯೇ ಆಕೆ. ಕೂಷ್ಮಾಂಡಾ ದೇವಿ ಸೂರ್ಯನ ಮಧ್ಯಭಾಗದಲ್ಲಿ ವಾಸಿಸುವ ಕಾರಣದಿಂದಾಗಿ ಭೂಮಿ ಮೇಲಿರುವ ಎಲ್ಲಾ ಅಂಧಕಾರವನ್ನು ನಿವಾರಣೆ ಮಾಡುವಳು. ದೇವಿಯು ಮೊದಲು ಮೊಟ್ಟೆಯನ್ನು ಸೃಷ್ಟಿಸಿ, ಅದರಿಂದ ಸಂಪೂರ್ಣ ಜೀವಸಂಕುಲಗಳಿಗೆ ಜೀವ ನೀಡಿದರು ಎನ್ನುವ ಪ್ರತೀತಿ ಇದೆ.
ತನ್ನ ಮೃದುವಾದ ನಗುವಿನೊಂದಿಗೆ ಬ್ರಹ್ಮಾಂಡವನ್ನು ಸೃಷ್ಟಿಸಿದ ಕೂಷ್ಮಾಂಡಾ ದೇವಿ
ಕೂಷ್ಮಾಂಡಾ ದೇವಿ ತನ್ನ ಮಂದ ನಗುವಿನಿಂದ ವಿಶ್ವವನ್ನೇ ಸೃಷ್ಟಿಸಿದ ಮಹಾದೇವಿ ಎಂದು ಪೂಜಿಸಲ್ಪಡುತ್ತಾರೆ. ಅವರ ನಗು, ಸಂಸ್ಕೃತದಲ್ಲಿ ಬ್ರಹ್ಮಾಂಡ ಎಂದು ಕರೆಯಲ್ಪಡುವ ಇಡೀ ವಿಶ್ವವನ್ನು ಸೃಷ್ಟಿಸಿದ ಶಕ್ತಿಯ ಸಂಕೇತವಾಗಿದ್ದು, ಕೂಷ್ಮಾಂಡಾ ಎಂಬ ಶಬ್ದವು “ಕು” (ಲಘು), “ಉಷ್ಮಾ” (ಉಷ್ಣತೆ) ಮತ್ತು “ಅಂಡ” (ಬ್ರಹ್ಮಾಂಡ) ಎಂಬ ಶಬ್ದಗಳಿಂದ ಬಂದಿದೆ. ಬ್ರಹ್ಮಾಂಡವು ಅಸ್ತಿತ್ವದಲ್ಲಿ ಇಲ್ಲದಿದ್ದಾಗ ದೇವಿಯ ಈ ರೂಪವು ಮೃದುವಾದ ನಗುವಿನೊಂದಿಗೆ ವಿಶ್ವವನ್ನು ಸೃಷ್ಟಿಸಿತು ಎಂದು ಹೇಳಲಾಗುತ್ತದೆ.
ನವರಾತ್ರಿಯ ನಾಲ್ಕನೇ ದಿನ ಹಳದಿ ಬಣ್ಣದ ಬಟ್ಟೆ ಧರಿಸುವ ಮಹತ್ವವೇನು?
ನವರಾತ್ರಿಯ ನಾಲ್ಕನೇ ದಿನ ದೇವಿಯ ಒಂಬತ್ತು ಅವತಾರಗಳಲ್ಲಿ ಒಂದಾದ ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಹಳದಿ ಬಣ್ಣದ ಬಟ್ಟೆ ಧರಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಇದು ಕೂಷ್ಮಾಂಡ ದೇವಿಗೆ ಪ್ರಿಯವಾದುದು. ಹಳದಿ ಬಣ್ಣವು ಖುಷಿ, ಉತ್ಸಾಹ ಮತ್ತು ಸಕಾರಾತ್ಮಕತೆಯನ್ನು ಸಂಕೇತಿಸುತ್ತದೆ. ಅಲ್ಲದೆ ಹಳದಿ ಬಣ್ಣವು ಶುಭದ ಸಂಕೇತವಾಗಿದ್ದು, ಈ ದಿನ ಹಳದಿ ಬಣ್ಣದ ಉಡುಗೆಯನ್ನು ಧರಿಸಿ ದೇವಿಯನ್ನು ಪೂಜಿಸುವುದರಿಂದ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ.
ನವರಾತ್ರಿಯ ನಾಲ್ಕನೇ ದಿನ: ಕೂಷ್ಮಾಂಡಾ ದೇವಿಗೆ ಕುಂಬಳಕಾಯಿ ಏಕೆ ಪ್ರಿಯವೆಂದು ಗೊತ್ತೇ?
ಕೂಷ್ಮಾಂಡಾ ದೇವಿಗೆ ಕುಂಬಳಕಾಯಿ ಪ್ರಿಯವಾಗಿರುವುದಕ್ಕೆ ಪುರಾಣಗಳಲ್ಲಿ ಹಲವು ಕಾರಣಗಳನ್ನು ನೀಡಲಾಗಿದೆ. “ಕೂಷ್ಮಾಂಡಾ” ಎಂಬ ಹೆಸರು ಸಂಸ್ಕೃತದಲ್ಲಿ “ಕುಂಬಳಕಾಯಿ” ಎನ್ನುವ ಅರ್ಥ ನೀಡುತ್ತದೆ. ಕುಂಬಳಕಾಯಿಯನ್ನು ದೇವಿಗೆ ನೀಡುವುದರಿಂದ ಋಣ, ದಾರಿದ್ರ್ಯ, ರೋಗ, ಶೋಕಗಳು ದೂರವಾಗಿ ಆಯುಷ್ಯ, ಯಶಸ್ಸು ಮತ್ತು ಆರೋಗ್ಯ ವೃದ್ಧಿ ಆಗುತ್ತದೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಕೂಷ್ಮಾಂಡಾ ತಾಯಿಯನ್ನು ಮೆಚ್ಚಿಸಲು ಕುಂಬಳಕಾಯಿ ಅರ್ಪಿಸಲಾಗುತ್ತದೆ. ಅದರಲ್ಲೂ ಬೂದು ಕುಂಬಳಕಾಯಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.




