ಬೆಂಗಳೂರು: ಇತ್ತೀಚೆಗೆ ಬಂದಿರುವ ವಿಧಾನಸಭಾ ಚುನಾವಣೆಗಳ ಬಗ್ಗೆ ಭಾರತದ ಪರಿಣಿತ ರಾಜಕೀಯ ತಂತ್ರಜ್ಞರಾದ ನರೇಶ್ ಅರೋರಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬದಲಾವಣೆ ಅಳವಡಿಸಿಕೊಳ್ಳದ ಪಕ್ಷಗಳಿಗೆ ಜನರು ಖಂಡಿತ ಗೇಟ್ ಪಾಸ್ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು “ವಿಭಿನ್ನವಾಗಿ ಕೆಲಸ ಮಾಡದ ಪಕ್ಷಗಳು ಮತ್ತು ನಾಯಕರು ರಾಜಕೀಯವಾಗಿ ಉಳಿಯಲು ಸಾಧ್ಯವಿಲ್ಲ. ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ, ಜನರ ಬದಲಾಗುತ್ತಿರುವ ಮನೋಭಾವಕ್ಕೆ ಅನುಗುಣವಾಗಿ ತಮ್ಮ ಪ್ರಚಾರ ಹಾಗೂ ಆಡಳಿತ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಬದಲಾವಣೆಯೇ ಶಾಶ್ವತ ಸತ್ಯ” ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ನರೇಶ್ ಅರೋರಾ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳ ಪರಿಕಲ್ಪನೆಯನ್ನು ರೂಪಿಸಿದ್ದರು. ಅಲ್ಲದೇ, ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿಗಳಾದ ದಿ.ಅಜಿತ್ ಪವಾರ್ ಹಾಗೂ ಎನ್ ಸಿಪಿಯ ಕಾರ್ಯತಂತ್ರಗಳನ್ನು ರೂಪಿಸಿ ಪಕ್ಷದ ಗೆಲುವಿಗೆ ಕಾರಣರಾಗಿದ್ದರು.




