ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳವಾಗುವ ಆತಂಕದಲ್ಲಿದ್ದ ಗ್ರಾಹಕರಿಗೆ ಕೆಎಂಎಫ್ ಸಿಹಿಸುದ್ದಿ ನೀಡಿದೆ. ದರ ಏರಿಸಲು ರೈತರಿಂದ ಬೇಡಿಕೆ ಇದ್ದು, ದರ ಏರಿಕೆ ಕುರಿತು ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ತಿಳಿಸಿದ್ದಾರೆ. ಹೀಗಾಗಿ ದರ ಏರಿಕೆ ಕುರಿತು ಮುಂದಿನ ದಿನಗಳಲ್ಲಿ ನೋಡೋಣ ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರೈತರು ಮತ್ತು ಸಹಕಾರ ಸಚಿವರು ಮಾಗಡಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದ ವೇಳೆ ಹಾಲಿನ ದರ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸದ್ಯಕ್ಕೆ ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹೀಗಾಗಿ ಸದ್ಯ ಹಾಲಿನ ದರ ಹೆಚ್ಚಳ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯದ ಹಾಲಿಗೆ ದೊಡ್ಡ ಮಾರುಕಟ್ಟೆ ಇದೆ. ಪ್ರಸ್ತುತ 11000 ಲೀಟರ್ ನಷ್ಟು ಹಾಲು ನಿತ್ಯ ಮಾರಾಟವಾಗುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಒಂದು ಲಕ್ಷ ಲೀಟರ್ ಗೆ ಹೆಚ್ಚಿಸುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.