ನಾಗ್ಪುರ: ವಿಮಾನಗಳಿಗೆ ಹುಸಿ ಬಾಂಬ್ ಕರೆ ಮಾಡುತ್ತಿದ್ದ ಆರೋಪಿಯನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಪತ್ತೆಹಚ್ಚಿದ್ದು, ಗೊಂಡಿಯಾ ಮೂಲದ ಜಗದೀಶ್ ಉಯ್ಕೆ(35) ಹುಸಿ ಬಾಂಬ್ ಕರೆಗಳ ಹಿಂದಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹುಸಿ ಬಾಂಬ್ ಕರೆಗಳ ಪರಿಣಾಮ ವಿಮಾನಗಳ ಹಾರಾಟ ವಿಳಂಬಕ್ಕೆ ಕಾರಣವಾಗಿದ್ದು, ವಿಮಾನ ನಿಲ್ದಾಣಗಳು ಮತ್ತು ಇತರೆ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲು ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಗದೀಶ್ ಉಯ್ಕೆ ಕಳೆದ 2021ರಲ್ಲಿ ಭಯೋತ್ಪಾದನೆ ಕುರಿತು ಬರೆದ ಪುಸ್ತಕವೊಂದರ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ಎಂದು ನಾಗ್ಪುರ ಪೊಲೀಸ್ ಇಲಾಖೆಯ ವಿಶೇಷ ತಂಡ ಗುರುತಿಸಿದೆ.
ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್(DCP) ಶ್ವೇತಾ ಖೇಡ್ಕರ್ ಅವರ ನೇತೃತ್ವದ ತನಿಖೆ ಆರೋಪಿ ಉಯ್ಕೆಯಿಂದ ಕಳುಹಿಸಲ್ಪಟ್ಟ ಇಮೇಲ್‌ಗಳನ್ನು ಈ ಪ್ರಕರಣದಲ್ಲಿ ಪತ್ತೆ ಮಾಡಿದ್ದರು. ಪ್ರಧಾನ ಮಂತ್ರಿಗಳ ಕಚೇರಿ(PMO), ರೈಲ್ವೆ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಉಪಮುಖ್ಯಮಂತ್ರಿ ಕಚೇರಿ, ವಿಮಾನಯಾನ ಕಚೇರಿಗಳು, ಪೊಲೀಸ್ ಮಹಾನಿರ್ದೇಶಕರು (DGP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಉಯ್ಕೆ ಇಮೇಲ್‌ಗಳನ್ನು ಕಳುಹಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ಇಮೇಲ್‌ಗಳ ಮೂಲ ಉಯ್ಕೆ ಎಂದು ಪತ್ತೆಹಚ್ಚುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ, ಉಯ್ಕೆ ತನ್ನ ಗೌಪ್ಯ ಭಯೋತ್ಪಾದನಾ ಕೋಡ್ ಬಗ್ಗೆ ಮಾಹಿತಿಯನ್ನು ನೀಡಲು ಅವಕಾಶ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಬೆದರಿಕೆಯ ಇಮೇಲ್ ಕಳುಹಿಸಿದ್ದ. ಈ ಬೆನ್ನಲ್ಲೇ ನಾಗ್ಪುರ ಪೊಲೀಸರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದರು. ಅಲ್ಲದೇ ಭಯೋತ್ಪಾದಕ ಬೆದರಿಕೆಗಳ ಕುರಿತಾಗಿ ಉಯ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಇಮೇಲ್ ಮೂಲಕ ಮನವಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 21 ರಂದು, ಉಯ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಇಮೇಲ್ ಕಳುಹಿಸಿದ್ದು, ಇದರಿಂದ ಡಿಜಿಪಿ ಮತ್ತು ಆರ್‌ಪಿಎಫ್‌ಗಳಿಗೆ ಮಾಹಿತಿ ತಲುಪಿ, ರೈಲ್ವೆ ನಿಲ್ದಾಣಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಕಾರಣವಾಯಿತು. ಉಯ್ಕೆಯನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 26ರ ವರೆಗೆ, 13 ದಿನಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 300ಕ್ಕೂ ಹೆಚ್ಚು ವಿಮಾನಗಳಿಗೆ ನಕಲಿ ಬಾಂಬ್ ಬೆದರಿಕೆಗಳು ಬಂದಿದ್ದು, ಅವುಗಳಲ್ಲಿ ಹೆಚ್ಚಿನವು ಸಾಮಾಜಿಕ ಮಾಧ್ಯಮಗಳ ಮೂಲಕ ಆಗಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಅಕ್ಟೋಬರ್ 22 ರಂದು, ಇಂಡಿಗೋ ಮತ್ತು ಏರ್ ಇಂಡಿಯಾ ಸೇರಿ ಸುಮಾರು 50 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.