ಮೈಸೂರು: ಅಕ್ರಮ ಸಂಬಂಧಕ್ಕಾಗಿ ಸಂಗಡಿಗರೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಹತ್ಯೆಗೈದ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದಾಶಿವ ಹತ್ಯೆಗೊಳಗಾದ ದುರ್ದೈವಿ. ರಾಜೇಶ್ವರಿ ಪತಿಯನ್ನೇ ಹತ್ಯೆಗೈದ ಪತ್ನಿಯಾಗಿದ್ದಾಳೆ.
ಕಳೆದ ಅಕ್ಟೋಬರ್ 17 ರಂದು ಪತ್ನಿ ರಾಜೇಶ್ವರಿ, ತನ್ನ ಸಂಗಡಿಗರಾದ ಶಿವಯ್ಯ ಹಾಗೂ ರಂಗಸ್ವಾಮಿ ಎಂಬುವವರೊಂದಿಗೆ ಸೇರಿ ಪತಿ ಸದಾಶಿವನ ಹತ್ಯೆ ಮಾಡಿದ್ದಳು. ಗಂಡ- ಹೆಂಡತಿ ನಡುವೆ ವೈಮನಸ್ಸು ಇದ್ದ ಕಾರಣ ಶಿವಯ್ಯ ಹಾಗೂ ರಂಗಸ್ವಾಮಿ ಹತ್ಯೆಯ ಪ್ಲಾನ್ ನೀಡಿ ಲಾಭ ಪಡೆದುಕೊಂಡಿದ್ದರು. ರಾತ್ರಿ ಸದಾಶಿವನಿಗೆ ಕಂಠಪೂರ್ತಿ ಮದ್ಯ ಕುಡಿಸಿ ಬಳಿಕ ಕಿರಾತಕರು ಕೊಲೆ ಮಾಡಿದ್ದರು. ಇದಾದ ನಂತರ ಹತ್ಯೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು.
ಕೊಲೆ ಮಾಡಿದ ಬಳಿಕ ಸದಾಶಿವನ ಶವವನ್ನು 15 ಕಿಲೋಮೀಟರ್ ದೂರ ಹೊತ್ತುಕೊಂಡು ಹೋಗಿ ಮಡುವಿನಹಳ್ಳಿ ಶಾಲೆಯ ಬಳಿ ಕೊಂಡೊಯ್ದಿದ್ದರು. ಹತ್ಯೆಯನ್ನು ವಾಮಾಚಾರ ಎಂದು ಬಿಂಬಿಸಲು ಸದಾಶಿವನ ಕತ್ತು ಸೀಳಿದ ಬಳಿಕ, ಶವದ ಬಳಿ ನಿಂಬೆಹಣ್ಣು, ಕುಂಕುಮ, ಅರಿಶಿಣ, ವೀಳ್ಯದೆಲೆ ಜತೆ 101 ರೂ. ಇಟ್ಟಿದ್ದರು.
ಈ ಸಂಬಂಧ ಪ್ರಕರಣದ ತನಿಖೆಗಿಳಿದ ನಂಜನಗೂಡು ಪೊಲೀಸರಿಗೆ ಸದಾಶಿವನದು ಹತ್ಯೆ ಪ್ರಕರಣ ಎಂದು ತಿಳಿದುಬಂದಿದ್ದು, ಆತನ ಪತ್ನಿಯ ಕುರಿತು ಮಾಹಿತಿ ಕಲೆಹಾಕಿದ ಪೊಲೀಸರಿಗೆ ಆಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 7 ಸಿಮ್‌ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿತ್ತು. ಕೂಡಲೇ ರಾಜೇಶ್ವರಿಯನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಿದಾಗ ಅಕ್ರಮ ಸಂಬಂಧದ ಕಹಾನಿ ಬೆಳಕಿಗೆ ಬಂದಿದ್ದು, ತನಿಖೆಯ ದಿಕ್ಕು ತಪ್ಪಿಸಲು ವಾಮಾಚಾರದ ನಾಟಕವಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಮೂವರೂ ಆರೋಪಿಗಳನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.