ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ಪ್ರವಾಸಕ್ಕೆ ಬಂದಿದ್ದ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಮುಖ್ಯ ಶಿಕ್ಷಕಿ ಸೇರಿ 7 ಮಂದಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಶಿಕ್ಷಕರನ್ನು ವಶಕ್ಕೆ ಪಡೆದಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತನೂರು ಮೊರಾರ್ಜಿ ದೇಸಾಯಿ ವಸತಿಶಾಲೆಯಿಂದ ಡಿ.10 ರಂದು ಮುರ್ಡೇಶ್ವರಕ್ಕೆ 46 ಮಂದಿ ವಿದ್ಯಾರ್ಥಿಗಳು ಹಾಗೂ 6 ಮಂದಿ ಶಿಕ್ಷಕರ ತಂಡ ಶೈಕ್ಷಣಿಕ ಪ್ರವಾಸಕ್ಕೆಂದು ಆಗಮಿಸಿದ್ದರು. ಸಮುದ್ರದಲ್ಲಿ ವಿದ್ಯಾರ್ಥಿಗಳು ಈಜಾಡುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕು 7 ವಿದ್ಯಾರ್ಥಿನಿಯರು ಕೊಚ್ಚಿಹೋಗಿದ್ದು, ಕೂಡಲೇ ಕಡಲತೀರದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ರಕ್ಷಣೆಗೆ ಮುಂದಾಗಿ ಮೂವರನ್ನು ರಕ್ಷಣೆ ಮಾಡಿದ್ದರು.
ಆದರೆ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಲ್ವರು ನಾಪತ್ತೆಯಾಗಿದ್ದು, ಓರ್ವ ವಿದ್ಯಾರ್ಥಿನಿ ಶ್ರವಂತಿ(15) ಶವವಾಗಿ ಪತ್ತೆಯಾಗಿದ್ದಳು. ಉಳಿದ ಮೂವರಿಗಾಗಿ ಹುಡುಕಾಟ ನಡೆಸಲಾಯಿತಾದರೂ ಯಾವುದೇ ಸುಳಿವು ಸಿಕ್ಕಿಲ್ಲವಾಗಿದ್ದು, ಡಿ.11 ರಂದು ಬೆಳಿಗ್ಗೆ ಉಳಿದ ಮೂವರು ವಿದ್ಯಾರ್ಥಿನಿಯರಾದ ದೀಕ್ಷಾ, ಲಾವಣ್ಯ ಹಾಗೂ ವಂದನಾ ಶವವಾಗಿ ಪತ್ತೆಯಾಗಿದ್ದರು.
ದುರಂತದ ಬೆನ್ನಲ್ಲೇ ವಸತಿ ಶಾಲೆಯ ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದ್ದು, ಅತಿಥಿ ಶಿಕ್ಷಕರು ಹಾಗೂ ಡಿಗ್ರೂಪ್ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿ ಆದೇಶಿಸಲಾಗಿತ್ತು. ಇದೀಗ ವಿದ್ಯಾರ್ಥಿನಿಯರ ಸಾವಿಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ಪ್ರಕರಣ ದಾಖಲಾಗಿದ್ದು, ಮುಖ್ಯಶಿಕ್ಷಕಿ ಸೇರಿ ಏಳು ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.