ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ, ಇಬ್ಬರು ಪುತ್ರಿಯರು ಎಂಟು ದಿನಗಳಿಂದ ತಮ್ಮ ತಾಯಿಯ ಶವದೊಂದಿಗೆ ಕಾಲಕಳೆದಿದ್ದಾರೆ ಎಂದು ಹೇಳಲಾಗಿದೆ. ಶವ ಕೊಳೆಯುವ ಹಂತ ತಲುಪಿದ್ದು, ನೆರೆಹೊರೆಯವರು ಸಹ ಮಹಿಳೆ ಮೃತಪಟ್ಟಿದ್ದನ್ನು ಗಮನಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮಗಳೊಬ್ಬಳು ಮನೆಯಿಂದ ಹೊರಬಂದು ತನ್ನ ತಾಯಿಯ ಅಂತ್ಯಕ್ರಿಯೆಗಾಗಿ ಸ್ಥಳೀಯರ ಬಳಿ ಹಣ ಕೇಳಲು ಪ್ರಾರಂಭಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದ್ದಾರೆ.
ವಾರಸಿಗುಡ ಇನ್ಸ್ಪೆಕ್ಟರ್ ಆರ್.ಸೈದುಲು ಮಾತನಾಡಿ, 45 ವರ್ಷದ ಚೀಮಲ ಲಲಿತಾ ತನ್ನ ಇಬ್ಬರು ಹೆಣ್ಣುಮಕ್ಕಳು ರಾವಲಿ(25) ಮತ್ತು ಯಶ್ವನಿಕಾ(22) ಎಂಬುವವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಲಲಿತಾ ಅವರು 2020ರಲ್ಲಿ ತಮ್ಮ ಪತಿ ರಾಜುವಿನಿಂದ ಬೇರ್ಪಟ್ಟರು. ರಾವಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಯಶ್ವನಿಕಾ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.
ಜನವರಿ 22 ರಂದು ರಾತ್ರಿ 9.30ರ ಸುಮಾರಿಗೆ ಕುಟುಂಬ ಸದಸ್ಯರು ಊಟ ಮಾಡಿ ವಾರಸಿಗುಡಾದ ಕಟ್ಟಡದ ಮೂರನೇ ಮಹಡಿಯಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಮಲಗಿದ್ದರು. ಜನವರಿ 23ರ ಬೆಳಿಗ್ಗೆ, ಯಶ್ವನಿಕಾ ಬೇಗನೆ ಎದ್ದು ತನ್ನ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದಳು.
ತಾಯಿ ಉತ್ತರಿಸಲಿಲ್ಲ. “ತಮ್ಮ ತಾಯಿ ಸಾವನ್ನಪ್ಪಿದ್ದಾರೆಂದು ತಿಳಿದ ಇಬ್ಬರು ಪುತ್ರಿಯರು ಆಘಾತಕ್ಕೊಳಗಾದರು. ಅವರು ಎಂಟು ದಿನಗಳ ಕಾಲ ತಾಯಿಯ ಶವದೊಂದಿಗೆ ವಾಸಿಸುತ್ತಿದ್ದರು” ಎಂದು ವಾರಸಿಗುಡ ಇನ್ಸ್ಪೆಕ್ಟರ್ ಹೇಳಿದರು.
ಶುಕ್ರವಾರ ಮಧ್ಯಾಹ್ನ, ಯಶ್ವನಿಕಾ ನಿವಾಸದಿಂದ ಹೊರಬಂದಳು ಮತ್ತು ಅಂತ್ಯಕ್ರಿಯೆಗಾಗಿ ಸ್ಥಳೀಯರಿಂದ ಹಣವನ್ನು ಕೇಳಲು ಪ್ರಾರಂಭಿಸಿದಳು. ಪೊಲೀಸರಿಗೆ ಮಾಹಿತಿ ನೀಡುವಂತೆ ಸ್ಥಳೀಯರು ಸೂಚಿಸಿದ್ದಾರೆ. ಮಾಹಿತಿ ಪಡೆದ ವಾರಸಿಗುಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಲಿತಾರ ಶವವನ್ನು ಪತ್ತೆ ಮಾಡಿದ್ದಾರೆ. ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.
ಶನಿವಾರ ಬೆಳಿಗ್ಗೆ 10 ಗಂಟೆಗೆ ಮರಣೋತ್ತರ ಪರೀಕ್ಷೆಗಾಗಿ ಲಲಿತಾ ಅವರ ದೇಹವನ್ನು ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಬಳಿಕ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗುವುದು. ಘಟನೆಯ ಬಗ್ಗೆ ಲಲಿತಾ ಅವರ ಕುಟುಂಬ ಸದಸ್ಯರಿಗೂ ಪೊಲೀಸರು ಮಾಹಿತಿ ನೀಡಿದ್ದಾರೆ.