ಕಲಬುರಗಿ: ಉದ್ಯಮಿ ಗೌತಮ್ ಅದಾನಿ ಪ್ರತಿಗಾಮಿ ಸರ್ಕಾರಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಇವರಿಗೆ ತತ್ವ, ಸಿದ್ಧಾಂತದ ಮೇಲೆ ನಡೆಯುತ್ತಿರುವ ಪಕ್ಷಗಳು ಬೇಕಿಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಅದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಖರ್ಗೆಯವರು ಕಲಬುರಗಿಯಿಂದ ನಾಸಿಕ್‌ಗೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಅದಾನಿ ಒಂದೆಡೆ ದೇಶದ ಸಂಪತ್ತನ್ನೇ ಲೂಟಿ ಮಾಡುತ್ತಿದ್ದಾರೆ, ಇನ್ನೊಂದೆಡೆ ಧರ್ಮದ ಆಧಾರದಲ್ಲಿ ಒಗ್ಗಟ್ಟಾಗುವ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ. ಆಧಾರದಲ್ಲಿ ಒಗ್ಗಟ್ಟಾಗುವ ಶಕ್ತಿ, ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಇವರು ಅದಾನಿಯಂತಹ ಬಂಡವಾಳಗಾರರಿಂದ ಹಣ ಪಡೆದು ಚುನಾವಣೆ ನಡೆಸುತ್ತಿದ್ದಾರೆ. ಮೋದಿ, ಶಾ ಇವರು ಇಂತಹ ಪ್ರತಿಗಾಮಿಗಳಿಗೆ ಬೆಂಬಲವಾಗಿ ನಿಲ್ಲುವ ಉದ್ದಿಮೆದಾರರನ್ನು ಬೆಳೆಸುತ್ತಿದ್ದಾರೆದು ದೂರಿದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಪರವಾಗಿಲ್ಲ, ವಾತಾವರಣ ಚೆನ್ನಾಗಿದೆ, ಜಾರ್ಖಂಡ್‌ಗೆ ನಾಳೆ ಹೋಗುತ್ತಿದ್ದೇನೆ. ಅಲ್ಲಿಯೂ ನಮಗೆ ಚೆನ್ನಾಗಿದೆ. ಇವತ್ತಿನವರೆಗೂ ಎಲ್ಲಾ ಕಡೆ ನಮಗೆ ಚೆನ್ನಾಗಿದೆ. ಬಿಜೆಪಿಯವರು ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ ಮಾಡಿದಂತೆ ಮಾಡುತ್ತಿದ್ದಾರೆ ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ರೈತರಿಗೆ ಎಂಎಸ್‌ಪಿ, ಕೃಷಿ ಸಬ್ಸಿಡಿ ಕೊಡುತ್ತಿಲ್ಲ. ಜನರ ಈ ಪ್ರಶ್ನೆಗೆ ಈ ಸರ್ಕಾರದ ಬಳಿ ಉತ್ತರವಿಲ್ಲ ಎಂದರು.
ನಾವು ಕರ್ನಾಟಕ ಮಾದರಿಯಲ್ಲಿ ಐದು ಗ್ಯಾರಂಟಿ ನೀಡುವುದಾಗಿ ಮಹಾರಾಷ್ಟ್ರದಲ್ಲಿಯೂ ಘೋಷಿಸಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ತಕ್ಷಣ ಜಾರಿಗೆ ತರುತ್ತೇವೆ ಎಂದರು.
ಮಹಾರಾಷ್ಟ್ರ ಸರ್ಕಾರ ರಚನೆ ಸಮಯದಲ್ಲಿ ಅದಾನಿ ಮನೆಯಲ್ಲಿ ಸಭೆಯಾಗಿತ್ತು ಎನ್ನುವ ಅಜಿತ್ ಪವಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆಯವರು, ಅದಾನಿ ರಾಜಕಾರಣದಲ್ಲಿ ಕೈ ಹಾಕಿದ್ದಾರೆ ಅಂತ ನಾವು ಹೇಳುತ್ತಲೇ ಇದ್ದೇವೆ, ಈತ ಒಂದು ಕಡೆ ದೇಶ ಲೂಟಿ ಮಾಡುತ್ತಿದ್ದಾರೆಂದರು.
ದೇಶದ 5% ಜನರಲ್ಲಿ 65% ಆಸ್ತಿ ಇದೆ. ಈ ದೇಶದ ಬಡವರ ಬಳಿ ಕೇವಲ 3% ಆಸ್ತಿ ಇದೆ. ಆದರೂ ಬಂಡವಾಳಶಾಹಿಗಳಿಗೆ ಬಂಬಲಿಸುವ ಕೆಲಸ ಮೋದಿ, ಅಮಿತ್ ಶಾ ಮಾಡುತ್ತಿದ್ದಾರೆ. 10-20 ಕ್ಯಾಪಿಟಲಿಸ್ಟ್ ಗೆ ಬೆಳೆಸುವ ಬದಲು ಮಧ್ಯಮ ವರ್ಗದ ಉದ್ದಿಮೆದಾರರಿಗೆ ಬೆಳೆಸಬೇಕಿದೆ ಎಂದು ಖರ್ಗೆ ಪ್ರತಿಪಾದಿಸಿದರು.