ಪಡಿತರ ಚೀಟಿದಾರರಿಗೆ ಆಹಾರ ಸಚಿವ ಉಮೇಶ್ ಕತ್ತಿ ಅವರು ಗುಡ್ ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ‘ಅನ್ನಭಾಗ್ಯ’ ಯೋಜನೆ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಹೌದು, ಈ ಕುರಿತು ಮಾತನಾಡಿದ ಸಚಿವ ಉಮೇಶ್ ಕತ್ತಿ, ಅನ್ನಭಾಗ್ಯ ಯೋಜನೆ ಯಾಕೆ ಬಂದ್ ಮಾಡ್ತಾರೆ. ಅನ್ನಭಾಗ್ಯ ಯೋಜನೆ ಬಂದ್ ಮಾಡಿ ಎಂದು ಸುಪ್ರಿಂ ಕೋರ್ಟ್ ಯಾಕೆ ಬಯಸುತ್ತೆ ಹೇಳಿ. ಸರ್ಕಾರ, ಸುಪ್ರಿಂಕೋರ್ಟ್ ಬಯಸಿದ್ರೆ ಅನ್ನಭಾಗ್ಯ ಯೋಜನೆ ಬಂದ್ ಮಾಡ್ತೀವಿ ಎಂದು ನಾನು ಹೇಳಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 5 ಕೆಜಿ ಅಕ್ಕಿ ಕೊಡಬೇಕಂತಿದೆ ಎಂದು ಹೇಳಿದರು.
ಅಷ್ಟೇ ಅಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದ್ದಂತೆಯೇ ನಮ್ಮ ಬಿಜೆಪಿ ಸರ್ಕಾರವೂ ಕೂಡ ಪಡಿತರ ಚೀಟಿದಾರರಿಗೆ 10 ಕೆ.ಜಿ ಪಡಿತರ ಅಕ್ಕಿ ವಿತರಿಸುತ್ತಿದೆ. ಇದರ ಜೊತೆಗೆ ಜೋಳ, ರಾಗಿಯನ್ನೂ ನೀಡುತ್ತಿದ್ದೇವೆ. ಈ ಯೋಜನೆಯನ್ನು ಕೈಬಿಡುವುದಿಲ್ಲ ಎಂದು ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.
ಇನ್ನು, ಇತ್ತೀಚೆಗೆ ಅನ್ನಭಾಗ್ಯ ಯೋಜನೆ ರದ್ದು ಮಾಡುವ ಕುರಿತು ಮಾತನಾಡಿದ್ದ ಸಚಿವ ಉಮೇಶ್ ಕತ್ತಿ, ಈಗ ರಾಜ್ಯದಲ್ಲಿ ‘ಅನ್ನಭಾಗ್ಯ’ ಯೋಜನೆ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ಯೂಟರ್ನ್ ಹೊಡೆದಿದ್ದಾರೆ.