ಕಾರವಾರ: ರಾಜ್ಯ ಸರ್ಕಾರ 2000 ಹೊಸ ಬಸ್ ಖರೀದಿ ಮಾಡಲು 130 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮುಂದಿನ 4 ತಿಂಗಳಲ್ಲಿ 300 ಹೊಸ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.
ಅವರು ಶುಕ್ರವಾರ ಶಿರಸಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದ ಶಿರಸಿ ಕೇಂದ್ರ ಬಸ್ ನಿಲ್ದಾಣ ಮತ್ತು ಸಾರಿಗೆ ಇಲಾಖೆಯ ಶಿರಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 6 ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಹೆಚ್ಚುವರಿ 400 ಬಸ್‌ಗಳ ಜೊತೆಗೆ ಒಟ್ಟು 700 ಬಸ್‌ಗಳನ್ನು ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ 480 ಕೋಟಿ ಮಹಿಳೆಯರು ಉಚಿತವಾಗಿ ಸಂಚರಿಸಿದ್ದಾರೆ. ಕಳೆದ 4 ವರ್ಷಗಳಿಂದ ಸಾರಿಗೆ ಸಂಸ್ಥೆಗಳಲ್ಲಿ ಬಸ್ ಖರೀದಿಸದೇ ಇರುವದರಿಂದ ಸಮಸ್ಯೆಯಾಗಿದ್ದು, ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. 4 ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 9,000 ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತಿದ್ದು, ಅದರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 2,000 ಸಿಬ್ಬಂದಿಗಳನ್ನು ಒದಗಿಸಲಾಗುವುದು ಹಾಗೂ ಅನುಕಂಪ ಆಧಾರದಲ್ಲಿ 1000 ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದರು.
ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಜಾರಿಗೊಳಿಸಿದ್ದು, ವಾರ್ಷಿಕ ರೂ.850 ಭರಿಸಿದರೆ ಇಡೀ ಕುಟುಂಬದ ಸದಸ್ಯರಿಗೆ ಅನುಕೂಲವಾಗಲಿದೆ. ಈ ಸಂಬಂಧ 300 ಆಸ್ಪತ್ರೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಮುಂದಿನ 3 ತಿಂಗಳಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಮಾತನಾಡಿ, ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ, ಸರ್ಕಾರ ರಚನೆ ಪೂರ್ವದಲ್ಲಿ ನೀಡಿದ ಆಶ್ವಾಸನೆಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲಾಗಿದೆ. ವಿದ್ಯಾರ್ಥಿಗಳು, ಮಹಿಳೆಯರಿಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಶಿರಸಿ ಭಾಗದ ಬಹುದಿನಗಳ ಬೇಡಿಕೆ ಇಂದು ಈಡೇರಿಸಲಾಗಿದೆ. ಕೇಂದ್ರ ಬಸ್ ನಿಲ್ದಾಣ ಅಗತ್ಯ ಮೂಲ ಸೌಕರ್ಯ ಒಳಗೊಂಡಿದ್ದು, ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಜಿಲ್ಲೆಗೆ ಬೇಕಾದ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ವಾ.ಕ.ರಾ.ಸಾ.ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಭರಮಗೌಡ (ರಾಜು) ಅಲಗೌಡ ಕಾಗೆ ಮಾತನಾಡಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಳೆಯ ನಿಲ್ದಾಣಗಳನ್ನು ಹಂತ ಹಂತವಾಗಿ ಹೊಸ ನಿಲ್ದಾಣಗಳಾಗಿ ಪರಿವರ್ತಿಸಲಾಗುವುದು. ಜನರ ಅನುಕೂಲ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹೊಸ ಬಸ್ ಖರೀದಿ ಮಾಡಲಾಗುತ್ತಿದೆ. ಸಾರಿಗೆ ಸಂಸ್ಥೆಯ ನೌಕರರು ಕರ್ತವ್ಯದ ಸಮಯದಲ್ಲಿಯೇ ನಿಧನ ಹೊಂದಿದರೆ ಅವರಿಗೆ ಅಪಘಾತ ವಿಮೆ ಮೊತ್ತವನ್ನು 50 ಲಕ್ಷದಿಂದ 1 ಕೋಟಿಯವರೆಗೆ ಹೆಚ್ಚಿಸಲಾಗಿದೆ. ನೌಕರರ ಬೇಡಿಕೆಗಳ ಈಡೇರಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ಸಾರಿಗೆ ಇಲಾಖೆ ಸಚಿವರಲ್ಲಿ ಮನವಿ ಮಾಡಿದರು.
ಶಿರಸಿ ಶಾಸಕ ಭೀಮಣ್ಣ ಟಿ. ನಾಯ್ಕ ಮಾತನಾಡಿ, ಶಿರಸಿ ವಿಭಾಗಕ್ಕೆ ಹೆಚ್ಚುವರಿ ಬಸ್‌ಗಳನ್ನು ಒದಗಿಸುವಂತೆ ಮತ್ತು ಸಿದ್ದಾಪುರದಲ್ಲಿ ಬಸ್ ಡಿಪೋ ನಿರ್ಮಾಣ ಮಾಡುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಯಲ್ಲಾಪುರ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಶಿರಸಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೆರೆ, ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಎನ್ ಗೌಡ, ವಾ.ಕ.ರ.ಸಾ.ಸಂಸ್ಥೆಯ ಉಪಾಧ್ಯಕ್ಷ ಪೀರಸಾಬ್ ಕೌತಾಳ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಯೋಗೇಶ ಎ. ಎಂ. ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಮತ್ತಿತರರು ಉಪಸ್ಥಿತರಿದ್ದರು.