ರಾಯಚೂರು: ರಾಯಚೂರು ಪ್ರವಾಸದಲ್ಲಿರುವ ಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ರಾಮಮಂದಿರ ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ ಅವರು ‘ಸುಪ್ರೀಂಕೋರ್ಟ್‌ನಲ್ಲೇ ಇತ್ಯರ್ಥವಾದ ಬಳಿಕವೂ ಸಿದ್ದರಾಮಯ್ಯ ರಾಮಮಂದಿರ ವಿವಾದಿತ ಸ್ಥಳ ಎಂದು ಮತ್ತೊಂದು ವಿವಾದ ಹುಟ್ಟು ಹಾಕುತ್ತಿದ್ದಾರೆ. ಕೂಲಿ ಕೆಲಸ ಮಾಡುವವರು 10 ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಅವರಿಗೆ ಕೇಳುವುದಕ್ಕೆ ಹಕ್ಕಿದೆ, ಇವನಿಗೆ ಏನಿದೆ?’ ಎಂದು ಏಕವಚನದಲ್ಲಿ ಗುಡುಗಿದ್ದಾರೆ.
ಅಷ್ಟೇ ಅಲ್ಲದೆ ಸಚಿವ ಈಶ್ವರಪ್ಪ ಅವರು, ‘ಗೋವಿನ ಬಗ್ಗೆ ಮಾತನಾಡಿದ್ದಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೆಲಕಚ್ಚಿತ್ತು. ಶ್ರೀರಾಮನ ಬಗ್ಗೆಯೂ ಮಾತನಾಡಿದರೆ ನೆಲದ ಒಳಗೆ ಹೋಗ್ತಾರೆ’ ಎಂದು ಹೇಳಿದ್ದಾರೆ. ರಾಮಮಂದಿರ ನಿರ್ಮಾಣದ ಲೆಕ್ಕ ಕೇಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವನು, ರಾಮನ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ಬಿಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.




