ಚಿತ್ರದುರ್ಗ: ಅಪ್ರಾಪ್ತರ ಮೇಲಿನ ಲೈಂಗಿಕ ಕಿರುಕುಳ ಆರೋಪದ ಮೇಲೆ ಫೋಕ್ಸೋ ಪ್ರಕರಣದಡಿ ಮುರುಘಾ ಶರಣರು ಜೈಲುಪಾಲಾಗಿದ್ದು, ಇದರ ನಡುವೆ ಮುರುಘಾ ಮಠದಲ್ಲಿ ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಮುರುಘಾ ಮಠದಲ್ಲಿ ಪ್ರತಿ ತಿಂಗಳ 5ನೇ ತಾರೀಖಿನಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಮುರುಘಾ ಮಠದ ಅನುಭವ ಮಂಟಪದಲ್ಲಿ ಈ ಕಾರ್ಯಕ್ರಮ ಆಯೋಜನೆ ಆಗುತ್ತದೆ.
ಹೌದು, ಮುರುಘಾಮಠದಲ್ಲಿ ಸೋಮವಾರಂದು (ಇಂದು) ಈ ತಿಂಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ತಿಂಗಳ 5ನೇ ತಾರೀಖಿನಂದು ನಡೆಯುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಯಲಿದೆ ಎಂದು ಮುರುಘಾ ಮಠ ಸ್ಪಷ್ಟಪಡಿಸಿದೆ.
ಈ ಬಾರಿ ಇದನ್ನು ನಡೆಸಿಕೊಡಲು ಮುರುಘಾ ಶ್ರೀಗಳಿಲ್ಲ. 32ನೇ ವರ್ಷದ 9ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಇಂದು ನಡೆಯಲಿದ್ದು, ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು ಇದರ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಮುರುಘಾ ಶ್ರೀಗಳ ಅನುಪಸ್ಥಿತಿಯಲ್ಲಿ ಮಠದ ಉಸ್ತುವಾರಿಯನ್ನು ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ವಹಿಸಿಕೊಂಡಿದ್ದು, ಅವರ ನೇತೃತ್ವದಲ್ಲಿಯೇ ಈ ಕಾರ್ಯಕ್ರಮ ನಡೆಯಲಿದೆ ಎಂದು ಮುರುಘಾ ಮಠ ತಿಳಿಸಿದೆ.
ಇನ್ನು, ದಾಂಪತ್ಯ ಜೀವನಕ್ಕೆ ಕಾಲಿಡಲು 8 ಜೋಡಿಗಳು ನೋಂದಣಿ ಮಾಡಿಸಿಕೊಂಡಿದ್ದು, ಸದ್ಯ 8ರ ಪೈಕಿ ಒಂದು ಜೋಡಿ ಮಾತ್ರ ಕೌಟುಂಬಿಕ ಸಮಸ್ಯೆಯಿಂದ ಸಾಮೂಹಿಕ ಮದುವೆ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದು, ಇದರಿಂದಾಗಿ ನಿಗದಿಯಂತೆಯೇ ಇಂದು ಮುರುಘಾ ಮಠದಲ್ಲಿ 7 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.