ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಪ್ರೇಮಿಗಳು ದುರಂತ ಅಂತ್ಯ ಕಂಡಿದ್ದು, ಚಿಕ್ಕಮಗಳೂರಿನಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಯುವತಿಯನ್ನು ಕರೆತಂದಿದ್ದ ಯುವಕ, ಕಾರಿನಲ್ಲೇ ಆಕೆಯನ್ನು ಕೊಂದು ನಂತರ ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಕ್ಕಮಗಳೂರು ಮೂಲದ ಪೂರ್ಣಿಮಾ ಮತ್ತು ಭದ್ರಾವತಿಯ ಮಧು ಎಂಬ ಇಬ್ಬರು ಪ್ರೇಮಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ದುರಂತ ಅಂತ್ಯ ಕಂಡವರಾಗಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಯುವತಿ ಪೂರ್ಣಿಮಾ ಶವ ಕಾರಿನಲ್ಲಿ ಪತ್ತೆಯಾಗಿದ್ದರೆ, ಯುವಕನ ಶವವು ಹತ್ತಿರದ ಕಾಫಿ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.