ಬೆಂಗಳೂರು: ಇಂದಿನಿಂದ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಗೊಂಡಿದ್ದು, ಈ ಜಿಲ್ಲೆಗಳಲ್ಲಿ ಅನ್ಲಾಕ್ ಘೋಷಣೆಯಾಗಿದ್ದರೂ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಇಂದಿನಿಂದ ಕಾರ್ಖಾನೆ, ಕಂಪನಿಗಳು, ಗಾರ್ಮೆಂಟ್ಸ್ನಲ್ಲಿ ಮತ್ತೆ ಕೆಲಸಗಳು ಶುರುವಾಗಿರುವುದರಿಂದ ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಆಫೀಸಿಗೆ ಹೋಗುವವರ ವಾಹನಗಳು ಹೆಚ್ಚಾಗಿದ್ದು, ಲಾಕ್ಡೌನ್ ಸಡಿಲಗೊಂಡಿರುವ ಜಿಲ್ಲೆಗಳಲ್ಲಿ ಸೆಮಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹೆಚ್ಚಿದ ವಾಹನ ದಟ್ಟಣೆ:
ಬೆಂಗಳೂರು ನಗರವು ಇಂದಿನಿಂದ ಅನ್ ಲಾಕ್ ಆಗಿರುವ ಹಿನ್ನೆಲೆ ಮೊದಲ ದಿನವೇ ವಾಹನ ದಟ್ಟಣೆ ಹೆಚ್ಚಾಗಿದ್ದು, ಎಲ್ಲಾ ಸಿಗ್ನಲ್ ಗಳೂ ಕಾರ್ಯ ನಿರ್ವಹಿಸುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಿದ ಪರಿಣಾಮ ಪೊಲೀಸರು & ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲಾ ವಾಹನಗಳನ್ನೂ ತಪಾಸಣೆ ಮಾಡಲಾಗದೆ ಕೈಚೆಲ್ಲಿದ್ದಾರೆ.
ಇನ್ನು ನವಯುಗ ಟೋಲ್, ಎಂಟನೇ ಮೈಲಿ, ಶಿವಾಜಿನಗರ, ಅತ್ತಿಬೆಲೆ ಸೇರಿದಂತೆ ಎಲ್ಲೆಡೆ ವಾಹನಗಳ ದಟ್ಟಣೆ ಅಧಿಕವಾಗುತ್ತಿದ್ದು, ಮಹಿಳೆಯರೂ ಕೂಡ ಇಂದೇ ಗಾರ್ಮೆಂಟ್ಸ್ ಗಳತ್ತ ಮುಖಮಾಡುತ್ತಿದ್ದಾರೆ.