ಪ್ರಧಾನಿ ರೇಸ್ ನಲ್ಲಿದ್ದ ಭಾರತೀಯ ಸಂಜಾತ, ಇನ್ಫಿ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್ ಅವರನ್ನು ಅಂತಿಮ ಸುತ್ತಿನಲ್ಲಿ ಮಣಿಸಿರುವ ಲಿಜ್ ಟ್ರಸ್ ಅವರು ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಲಿಜ್ ಅವರು ಥೆರೆಸಾ ಮೇ ಹಾಗೂ ಮಾರ್ಗರೇಟ್ ಥ್ಯಾಚರ್ ಬಳಿಕ ಬ್ರಿಟನ್ನಿನ 3ನೇ ಮಹಿಳಾ ಪ್ರಧಾನಿ ಎನಿಸಿಕೊಂಡಿದ್ದಾರೆ. ಇನ್ನು ಲಿಜ್ ಪರ 81,326 ಹಾಗೂ ಸುನಾಕ್ ಪರ 60,399 ಮತಗಳು ಚಲಾವಣೆಗೊಂಡಿವೆ. ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ನಂತರ ಸ್ಥಾನ ತೆರವಾಗಿತ್ತು.
ಬ್ರಿಟನ್ ನೂತನ ಪ್ರಧಾನಿ ಲಿಜ್ ಟ್ರುಸ್ ಯಾರು?
➤ ಪೂರ್ಣ ಹೆಸರು: ಮೇರಿ ಎಲಿಜಬೆತ್ ಟ್ರಸ್.
➤ ಜನನ: 26 ಜುಲೈ 1975
➤ ಕನ್ಸರ್ವೇಟಿವ್ ಪಕ್ಷದ ಸಂಸದೆ. (2010ರಿಂದ ಸೌತ್ ವೆಸ್ಟ್ ನಾರ್ಫೋಕ್‌ನಿಂದ ಆಯ್ಕೆ)
➤ ವಿದೇಶಾಂಗ ಕಾರ್ಯದರ್ಶಿ.
➤ 2019ರಿಂದ ಮಹಿಳಾ ಮತ್ತು ಸಮಾನತೆಗಳ ಸಚಿವರಾಗಿ ಸೇವೆ.
➤ ಸೆ.6 ರಂದು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ.
➤ ಬ್ರಿಟನ್ ಪ್ರಧಾನಿ ಹುದ್ದೆಗೇರಿದ 3ನೇ ಮಹಿಳೆ.
ಉತ್ತಮ ಯೋಜನೆ ಜಾರಿಗೊಳಿಸುವೆ: ಲಿಜ್
ಇನ್ನು, ದೀರ್ಘಕಾಲಿಕ ಸಮಸ್ಯೆಗಳಾದ ಆರೋಗ್ಯ ಸೇವೆ, ಇಂಧನ, ತೆರಿಗೆ ಹೊರೆ ಹಾಗೂ ಆರ್ಥಿಕ ಬೆಳವಣಿಗೆಗೆ ಪೂರಕವಾದ ಉತ್ತಮ ಯೋಜನೆಗಳನ್ನು ಜಾರಿಗೊಳಿಸುತ್ತೇನೆ ಎಂದು ಬ್ರಿಟನ್ನಿನ ನೂತನ ಪ್ರಧಾನಿ ಲಿಜ್ ಟ್ರಸ್ ತಿಳಿಸಿದ್ದಾರೆ.
ಪ್ರಧಾನಿಯಾಗಿ ಹೊರಹೊಮ್ಮಿದ ಬಳಿಕ ಮಾತನಾಡಿ, 2024ರಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಬಹುದೊಡ್ಡ ಗೆಲುವನ್ನೂ ತಂದುಕೊಡಲು ಶ್ರಮಿಸುತ್ತೇನೆ ಎಂದಿದ್ದಾರೆ. ಇನ್ನು ಪ್ರತಿಸ್ಪರ್ಧಿ ರಿಷಿ ಸುನಾಕ್ ಅವರನ್ನು ಲಿಜ್ 20,927 ಮತಗಳ ಅಂತರದಿಂದ ಮಣಿಸಿದ್ದಾರೆ.