ಮಂಗಳೂರು: ಮಂಗಳೂರಿನ ಯುವಕ ಪೃಥ್ವಿರಾಜ್ ಥೈಲ್ಯಾಂಡ್‌ನ ಯುವತಿ ಮೊಂತಕನ್ ಸಸೂಕ್ ಅವರನ್ನು ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಥೈಲ್ಯಾಂಡ್‌ನಲ್ಲಿ ಅರಳಿದ ಈ ಜೋಡಿಯ ಪ್ರೇಮಕಥೆ ದೇಶ-ಕಾಲ, ಜಾತಿ-ಮತ ಮೀರಿ ಮಂಗಳೂರಿನಲ್ಲಿ ಸಪ್ತಪದಿ ತುಳಿಯುವ ಮೂಲಕ ಒಂದಾಗಿದೆ.
ಮಂಗಳೂರಿನ ಪೃಥ್ವಿರಾಜ್ ಎಸ್.ಅಮೀನ್ ಹಾಗೂ ಥೈಲ್ಯಾಂಡ್‌ನ ಮೊಂತಕನ್ ಸಸೂಕ್ ಜೋಡಿ ವಿವಾಹ ಮಾಡಿಕೊಂಡಿದ್ದಾರೆ. ವಕೀಲೆ ಸುಜಯಾ ಸತೀಶ್ ಹಾಗೂ ಸತೀಶ್ ಕುಮಾರ್ ಅವರ ಪುತ್ರ ಪೃಥ್ವಿರಾಜ್ ಅವರು ಬೆಂಗಳೂರಿನಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪನಿ ಹೊಂದಿದ್ದಾರೆ. ಇವರ ಸಂಸ್ಥೆ ಟಾಟಾ, ಪೋರ್ಸ್ ಮುಂತಾದ ಕಂಪೆನಿಗಳಿಗೆ ಸಾಫ್ಟ್‌ವೇರ್ ಸರ್ವೀಸ್ ಒದಗಿಸುತ್ತದೆ.
ಪ್ರಾಜೆಕ್ಟ್ ಮೇಲೆ ಥೈಲ್ಯಾಂಡ್ ದೇಶಕ್ಕೆ ಹೋಗಿದ್ದಾಗ ಪೃಥ್ವಿರಾಜ್‌ಗೆ ಪ್ರೇಮಿಗಳ ದಿನದಂದೇ ಮೊಂತಕನ್ ಸಸೂಕ್ ಪರಿಚಯವಾಗಿದ್ದಾರೆ. ಅವರನ್ನು ನೋಡಿದ್ದೇ ಪೃಥ್ವಿರಾಜ್‌ಗೆ ಪ್ರೀತಿ ಚಿಗುರೊಡೆದಿದೆ. ಮೊಂತಕನ್ ಕೂಡ ಇವರ ಪ್ರೀತಿಯನ್ನು ಒಪ್ಪಿದ್ದಾರೆ. ಪ್ರೀತಿ ಗಟ್ಟಿಗೊಳ್ಳುತ್ತಿದ್ದಂತೆ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಭಾರತೀಯ ಪದ್ಧತಿ ಪ್ರಕಾರ ಇಲ್ಲಿನ ಶ್ರೀಮಂಗಳಾದೇವಿ ದೇವಸ್ಥಾನದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಮದುವೆ ನಡೆದಿದೆ. ಡಿ.7ರಂದು ಅಡ್ಯಾರ್ ಗಾರ್ಡನ್‌ನಲ್ಲಿ ಅದ್ದೂರಿ ರಿಸೆಪ್ಪನ್ ನಡೆಯಲಿದೆ. ಇನ್ನು ಮುಂದೆ ಮೊಂತಕಾನ್ ಥೈಲ್ಯಾಂಡ್ ತೊರೆದು ಭಾರತೀಯ ಸೊಸೆಯಾಗಲಿದ್ದಾರೆ.