ಜಾರ್ಖಂಡ್: ಸಂಭ್ರಮ ಸಡಗರದಿಂದ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮವೊಂದು ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಮುರಿದುಬಿದ್ದ ಘಟನೆ ಜಾರ್ಖಂಡ್‌ನ ದಿಯೋಗರ್‌ನಲ್ಲಿ ನಡೆದಿದೆ.
ಭಾನುವಾರ, ಭಾಗಲ್‌ಪುರದ ಅಂಕಿತಾ ಎಂಬುವವರ ವಿವಾಹವನ್ನು ದಿಯೋಗರ್‌ನ ಘೋರ್ಮಾರಾದ ಅರ್ನವ್ ಎಂಬುವವರನೊಂದಿಗೆ ನಿಶ್ಚಯವಾಗಿತ್ತು. ವರನ ಊರಿನ ಸಮೀಪದ ರೆಸಾರ್ಟ್ ಒಂದರಲ್ಲೇ ಮದುವೆ ನಿಗದಿ ಮಾಡಿದ್ದು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಭಾನುವಾರ ರಾತ್ರಿ ವೇಳೆಗೆ ಮದುವೆ ಪೂರ್ವದ ಶಾಸ್ತ್ರಗಳನ್ನು ರೆಸಾರ್ಟ್ ಒಳಭಾಗದಲ್ಲಿ ನಡೆಸಿದ್ದು, ಮದುವೆಯ ಶಾಸ್ತ್ರಗಳು ರೆಸಾರ್ಟ್ ಆವರಣದ ತೆರೆದ ಗಾರ್ಡನ್ ಪ್ರದೇಶದಲ್ಲಿ ನಡೆಯಬೇಕಿತ್ತು.
ವರ್ಷದ ಕೊನೆಯಾಗಿರುವ ಹಿನ್ನಲೆ ಭಾರೀ ಪ್ರಮಾಣದಲ್ಲಿ ಚಳಿಯ ವಾತಾವರಣವಿದ್ದು ಮದುವೆ ಮಂಟಪದಲ್ಲಿ ವರನನ್ನು ಕೂರಿಸಿ ಶಾಸ್ತ್ರಿಗಳು ಮದುವೆ ಶಾಸ್ತ್ರ ಆರಂಭಿಸಿದ್ದರು. ಆದರೆ ಈ ವೇಳೆ ತೀವ್ರ ಚಳಿಯಿಂದಾಗಿ ವರ ಅರ್ನವ್ ಕುಸಿದುಬಿದ್ದಿದ್ದಾನೆ. ಕೂಡಲೇ ಮನೆಯವರು, ಕುಟುಂಬಸ್ಥರು ವರನನ್ನು ಕೋಣೆಗೆ ಕರೆದೊಯ್ಕು ಆರೈಕೆ ಮಾಡಿದ್ದು ಬಳಿಕ ವೈದ್ಯರನ್ನೂ ಕರೆಸಿ ತಪಾಸಣೆ ನಡೆಸಿದ್ದರು.
ಒಂದೆಡೆ ಕೊರೆಯುವ ಚಳಿ ಇನ್ನೊಂದೆಡೆ ತೆರೆದ ಮದುವೆ ಮಂಟಪದಲ್ಲಿ ವಧು ವರನನ್ನು ಕೂರಿಸಿ ಪುರೋಹಿತರು ಮದುವೆ ಶಾಸ್ತ್ರ ನಡೆಸುತ್ತಿರಬೇಕಾದರೆ ವರ ಇದ್ದಕಿದ್ದಂತೆ ಚಳಿ ತಾಳಲಾರದೆ ನಡುಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ, ಕೂಡಲೇ ವರನ ಕಡೆಯವರು ಅರ್ನವ್ ನನ್ನು ಕೊಠಡಿಗೆ ಕರೆದುಕೊಂಡು ಹೋಗಿ ಉಪಚರಿಸಿ ಕೈ ಕಾಲು ತಿಕ್ಕಿ ಮೈ ಬೆಚ್ಚಗೆ ಮಾಡಿದ್ದಾರೆ ಬಳಿಕ ವೈದ್ಯರನ್ನು ಕರೆಸಿ ಮದ್ದು ನೀಡಿ ಹುಷಾರಾಗುವಂತೆ ಮಾಡಿದ್ದಾರೆ.
ಇತ್ತ ಚಳಿಯಿಂದ ಸುಧಾರಿಸಿಕೊಂಡು ವರ ಮಂಟಪಕ್ಕೆ ಬಂದು ಕೂರುವಷ್ಟರಲ್ಲಿ ವಧು ಮದುವೆಗೆ ನಿರಾಕರಿಸಿದ್ದಾಳೆ. ವರ ಅಸ್ವಸ್ಥನಾಗಿದ್ದನ್ನು ಕಂಡು, ಹುಡುಗನಿಗೆ ಯಾವುದೋ ಆರೋಗ್ಯ ಸಮಸ್ಯೆಯಿದ್ದು ಈ ಕಾರಣಕ್ಕಾಗಿಯೇ ಹುಡುಗಿಯ ಮನೆಯಲ್ಲಿ ನಡೆಯಬೇಕಿದ್ದ ವಿವಾಹನ್ನು ಒತ್ತಾಯಪೂರ್ವಕವಾಗಿ ತಮ್ಮ ಊರಿನಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಮದುವೆಯಾಗಲ್ಲ ಎಂದು ವಧು ಪಟ್ಟು ಹಿಡಿದಿದ್ದಾಳೆ. ಕೊನೆಗೆ ಕುಟುಂಬಸ್ಥರು ಪೊಲೀಸರ ಮೊರೆ ಹೋದರೂ ಯಾವುದೇ ಪ್ರಯೋಜವಾಗಿಲ್ಲವಾಗಿದ್ದು, ಕೊನೆಗೂ ಮದುವೆ ಮುರಿದುಕೊಂಡು ಎರಡೂ ಕುಟುಂಬಗಳು ತಮ್ಮ ಮನೆಗಳಿಗೆ ಮರಳಿವೆ.