ಬೆಂಗಳೂರು: ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿಯ ವರದಿಯಲ್ಲಿ ಜೈನ ಸಮಾಜದ ಜನಸಂಖ್ಯೆ 2011ನೇ ಸಾಲಿಗಿಂತ ಕಡಿಮೆಯಾಗಿರುವುದು ತಿಳಿದು ಬಂದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರದ ಈ ಜಾತಿ ಗಣತಿಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಹೊಂಬುಜ ಜೈನ ಮಠದ ಡಾ.ದೇವೆಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್ನ 36ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಜೈನ ಸಮುದಾಯ ಯಾರ ವಿರೋಧಿಗಳೂ ಅಲ್ಲ. ಸೋರಿಕೆಯಾಗಿರುವ ಸರ್ಕಾರದ ಜಾತಿ ಗಣತಿ ವರದಿಯಲ್ಲಿ ಜೈನರ ಸಂಖ್ಯೆಯು 2011ನೇ ಸಾಲಿಗಿಂತ ಕಡಿಮೆ ಇದೆ. ರಾಜ್ಯದಲ್ಲಿ ಜೈನರ ಸಂಖ್ಯೆ ಹೆಚ್ಚಾಗಬೇಕಾಗಿದೆ. ರಾಜ್ಯದಲ್ಲಿ ಅಂದಾಜಿನ ಪ್ರಕಾರ 17 ರಿಂದ 20 ಲಕ್ಷ ಜೈನ ಸಮುದಾಯದವರಿದ್ದಾರೆ. ಈ ಬಗ್ಗೆ ಕ್ರಮ ಬದ್ಧ ಗಣತಿ ಆಗಬೇಕು. ಸರ್ಕಾರ ನಡೆಸಲಾದ ಜಾತಿ ಗಣತಿ ವರದಿಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದರು.
ಜೈನ ಸಮಾಜವು ಒಗ್ಗಟ್ಟಿನಿಂದ ಮುಂದೆ ಹೋಗಬೇಕಿದೆ. ಜಾತಿ, ಧರ್ಮಕ್ಕೆ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಮನ್ನಣೆಗಳನ್ನು ನೀಡುವ ವ್ಯವಸ್ಥೆ ಇದೆ. ರಾಜ್ಯದ ಜೈನ ದೇವಾಲಯಗಳಲ್ಲಿ ಒಂದೇ ನಮೂನೆಯಡಿ ಸಮಗ್ರ ಜೈನ ಸಮುದಾಯದ ಜನಸಂಖ್ಯೆ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಬೇಕು. ಜನಗಣತಿಯ ಅಂಕಿ ಅಂಶದ ಮೇಲೆ ಸರ್ಕಾರದ ಬಳಿ ಸಂವಿಧಾನಾತ್ಮಕವಾಗಿ ಹಕ್ಕು ಕೇಳಬಹುದೇ ವಿನಃ ರಾಜಕೀಯವಾಗಿ ನಮಗೆ ಯಾವುದೇ ಅಸ್ತಿತ್ವವಿಲ್ಲ ಎಂದು ಹೇಳಿದ್ದಾರೆ.