ನವದೆಹಲಿ: 2024ರ ಮೊದಲ ತ್ರೈಮಾಸಿಕದಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಗಳಿಂದ ಭಾರತೀಯರು 120.3 ಕೋಟಿ ರೂ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಆಗ್ನೇಯ ಏಷ್ಯಾದ ಸೈಬರ್ ಅಪರಾಧಿಗಳು ಹಣವನ್ನು ಸುಲಿಗೆ ಮಾಡಲು ನಕಲಿ ಕಾನೂನು ಜಾರಿ ವೇಷವನ್ನು ಬಳಸಿಕೊಳ್ಳುತ್ತಿದ್ದು, ಈ ವಿಚಾರವಾಗಿ ಇತ್ತೀಚೆಗೆ ಪ್ರಧಾನಿ ಮೋದಿ ಸಹ ಜನರನ್ನು ಎಚ್ಚರಿಸಿದ್ದಾರೆ.
ಗೃಹ ವ್ಯವಹಾರಗಳ ಸಚಿವಾಲಯ (MHA) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಹಗರಣಗಳನ್ನು ಪ್ರಾಥಮಿಕವಾಗಿ ಮ್ಯಾನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾದಿಂದ ಕಾರ್ಯಗತಗೊಳಿಸಲಾಗುತ್ತಿದೆ. ಇದು ಜನವರಿ ಮತ್ತು ಏಪ್ರಿಲ್ 2024ರ ನಡುವೆ ವರದಿಯಾದ 46% ಸೈಬರ್ ವಂಚನೆಗೆ ಕಾರಣವಾಗಿದೆ. ಈ ಅವಧಿಯಲ್ಲಿ ಭಾರತದಾದ್ಯಂತ ವಿವಿಧ ಸೈಬರ್ ಅಪರಾಧಗಳಿಗೆ ಒಳಗಾದವರಿಗೆ 1,776 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (NCRP) 7.4 ಲಕ್ಷ ದೂರುಗಳನ್ನು ದಾಖಲಿಸಿದ್ದಾಗಿ ಬಹಿರಂಗಪಡಿಸಿದ್ದು ಈ ಸಮಸ್ಯೆಯ ಪ್ರಮಾಣವನ್ನು ಎತ್ತಿ ತೋರಿಸಿದೆ. ಈ ಸಂಖ್ಯೆಯು 2023ರ ಒಟ್ಟು 15.56 ಲಕ್ಷ ದೂರುಗಳಲ್ಲಿ ಅರ್ಧದಷ್ಟು ತಲುಪುತ್ತದೆ. ಕಳೆದ 2022 ರಲ್ಲಿ 9.66 ಲಕ್ಷ ಮತ್ತು 2021 ರಲ್ಲಿ 4.52 ಲಕ್ಷ ದೂರುಗಳು ದಾಖಲಾಗಿದ್ದನ್ನು ಹೋಲಿಕೆ ಮಾಡಿದಾಗ, ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧ ಘಟನೆಗಳಲ್ಲಿ ಕಾಣುತ್ತಿರುವ ಗಮನಾರ್ಹ ಏರಿಕೆಯನ್ನು ಇದು ತೋರಿಸುತ್ತಿದೆ.
“ಡಿಜಿಟಲ್ ಅರೆಸ್ಟ್” ವಂಚನೆಗಳಲ್ಲಿ, ಪೊಲೀಸ್ ಅಧಿಕಾರಿಗಳಂತೆ ಕರೆ ಮಾಡುವ ವಂಚಕರು ಮಾದಕವಸ್ತು ಕಳ್ಳಸಾಗಣೆ, ನಕಲಿ ಪಾಸ್‌ಪೋರ್ಟ್ ಇಲ್ಲವೇ ಅಕ್ರಮ ಹಣ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾಗಿ ಆರೋಪಿಸಿ ಅರೆಸ್ಟ್ ಮಾಡೋದಾಗಿ ಬೆದರಿಕೆ ಒಡ್ಡುತ್ತಾರೆ. ಅಲ್ಲದೇ ನಕಲಿ ಅರೆಸ್ಟ್ ವಾರೆಂಟ್, ಕೋರ್ಟ್ ಆದೇಶ ಪ್ರತಿಯನ್ನೂ ಸಹ ಕಳುಹಿಸುವ ಮೂಲಕ ಅಮಾಯಕರನ್ನು ನಂಬಿಸಲಾಗುತ್ತದೆ. ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಹಣಕ್ಕೆ ಬೇಡಿಕೆ ಇಟ್ಟು ಸಿಕ್ಕಷ್ಟು ಹಣವನ್ನು ಸುಲಿಗೆ ಮಾಡಲಾಗುತ್ತದೆ.
ಡಿಜಿಟಲ್ ಅರೆಸ್ಟ್ ಮಾತ್ರವಲ್ಲದೇ ಇನ್ವೆಸ್ಟ್‌ಮೆಂಟ್ ವಂಚನೆಯಿಂದ 1,420.48 ಕೋಟಿ, ಟಾಸ್ಕ್ ಆಧಾರಿತ ಹೂಡಿಕೆ ಹಗರಣಗಳಿಂದ 222.58 ಕೋಟಿ ಮತ್ತು ಆನ್ ಲೈನ್ ರೋಮ್ಯಾನ್ಸ್ ಹಗರಣಗಳಿಂದ 13.23 ಕೋಟಿ ರೂ ವಂಚನೆಗಳು ಇತರೆ ವಂಚನೆ ಪ್ರಕರಣಗಳಿಂದ ವರದಿಯಾಗಿದೆ.
ಮ್ಯಾನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾದ ಸೈಬರ್ ಅಪರಾಧಿಗಳು ಭಾರತೀಯರನ್ನು ನಕಲಿ ಉದ್ಯೋಗದ ಆಮಿಷ ಮತ್ತು ಇತರೆ ಅವಕಾಶಗಳ ಆಮಿಷವೊಡ್ಡಲು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುತ್ತಾರೆ. ಉದ್ಯೋಗದ ನಿರೀಕ್ಷೆಯಲ್ಲಿರುವವರು, ಆರ್ಥಿಕ ತೊಂದರೆಯಲ್ಲಿರುವವರ ಪರಿಸ್ಥಿತಿಯನ್ನು ಬಳಸಿಕೊಂಡು ಅಮಾಯಕರನ್ನು ವಂಚನೆ ಮಾಡಲಾಗುತ್ತಿದೆ. ಹೀಗಾಗಿ ಇಂತಹ ವಂಚನೆಗಳಿಂದ ಜನರು ಜಾಗೃತರಾಗಿರಬೇಕಾಗಿದೆ.