ಮೈಕ್ರೋಸಾಫ್ಟ್ ಇಂದು ಅಧಿಕೃತವಾಗಿ ತನ್ನ ವೆಬ್ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಬಂದ್ ಮಾಡಿದ್ದು, ಬರೋಬ್ಬರಿ 27 ವರ್ಷಗಳ ಕಾರ್ಯಾಚರಣೆ ಬಳಿಕ ಸ್ಥಗಿತಗೊಂಡಿದೆ.
“ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್” ಬಗ್ಗೆ ನಿಮಗೆಲ್ಲ ಗೊತ್ತೇ ಇರಬಹುದು. ಕಳೆದ ಐದು- ಹತ್ತು ವರ್ಷಗಳ ಹಿಂದೆ ಕಂಪ್ಯೂಟರ್ ಬಳಸಿದವರಿಗೆ ಈ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಮರೆಯಲು ಸಾಧ್ಯವಿಲ್ಲ. ಅಂತರ್ಜಾಲ ಜಗತ್ತಿನಲ್ಲಿ ಮೊದಲ ಬಾರಿಗೆ ಬಂದ ಬ್ರೌಸರ್ ಆಗಿದೆ ಇಂಟರ್ನೆಟ್ ಎಕ್ಸ್‌ಪ್ಲೋರರ್. ಬೇರೆ ಯಾವುದೇ ಬ್ರೌಸರ್ ಇಲ್ಲದ ಸಮಯದಲ್ಲಿ ನಮೆಗೆಲ್ಲ ಇದ್ದ ಏಕೈಕ ಆಯ್ಕೆಯಾಗಿದ್ದು ಈ ಇಂಟರ್ ನೆಟ್ ಎಕ್ಸ್‌ಪ್ಲೋರರ್. ಆದರೆ, ಇಂದಿನಿಂದ ಇಂಟರ್ ನೆಟ್ ಎಕ್ಸ್‌ಪ್ಲೋರರ್ ಲಭ್ಯವಿರುವುದಿಲ್ಲ.
ಮೈಕ್ರೋಸಾಫ್ಟ್ ತನ್ನ ಹಳೆಯ ಬ್ರೌಸರ್ ಆಗಿರುವ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದು, 27 ವರ್ಷಗಳ ಸುದೀರ್ಘ ಸೇವೆಯ ನಂತರ, ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಂತಿಮವಾಗಿ ಇಂದು ಅಂತ್ಯವಾಗಲಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಮೊದಲು 1995 ರಲ್ಲಿ ವಿಂಡೋಸ್ 95 ಗಾಗಿ ಆಡ್-ಆನ್ ಪ್ಯಾಕೇಜ್ ಆಗಿ ಬಿಡುಗಡೆ ಮಾಡಲಾಯಿತು. ನಂತರ, ಕಂಪನಿಯು ಪ್ಯಾಕೇಜ್‌ನ ಭಾಗವಾಗಿ ಬ್ರೌಸರ್ ಅನ್ನು ಉಚಿತವಾಗಿ ನೀಡಲು ಪ್ರಾರಂಭಿಸಿತು.
1995ರಲ್ಲಿ ಆರಂಭವಾಗಿ 2003 ರವರೆಗೂ ಇಂಟರ್ನೆಟ್ ಬಳಕೆದಾರರ ನೆಚ್ಚಿನ ಬ್ರೌಸರ್ ಆಗಿದ್ದ ಇಂಟರ್ನೆಟ್ ಎಕ್ಸ್‌ಪ್ಲೋರರ್, ಬಳಿಕ ಇತರೆ ಬ್ರೌಸರ್‌ಗಳ ಅಬ್ಬರದಿಂದ ಮಂಕಾಗಿತ್ತು. ೨೦೧೬ರಲ್ಲಿ ಕಂಪನಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ನ ಅಪ್ಡೇಟ್ ನಿಲ್ಲಿಸಿತು, ನಂತರ ಹಂತ ಹಂತವಾಗಿ ಬ್ರೌಸರ್ ಸ್ಥಗಿತಗೊಳಿಸಲು ನಿರ್ಧರಿಸಿತು. ಹಾಗಾಗಿ,ಇಂದಿಂದ ಬ್ರೌಸರ್ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಇನ್ನು, ಈ ಅಪ್ಲಿಕೇಶನ್ ತೆರೆಯಲು ಪ್ರಯತ್ನಿಸುವವರನ್ನು ಕಂಪನಿಯ ಇತ್ತೀಚಿನ ಬ್ರೌಸರ್ ಮೈಕ್ರೋಸಾಫ್ಟ್ ಎಡ್ಜ್ ಬಳಸುವಂತೆ ನಿರ್ದೇಶಿಸುತ್ತಿದೆ.