ಚಿತ್ರದುರ್ಗ: ಜಿಲ್ಲೆಯಲ್ಲಿ ಸದ್ಯ ಬಹುತೇಕ ಬೆಳೆಗಳ ಕಟಾವು ಮುಗಿದಿದ್ದು ರೈತರು ಮೆಕ್ಕೆಜೋಳ, ಶೇಂಗಾ, ಹತ್ತಿ ಮುಂತಾದ ವಾಣಿಜ್ಯ ಬೆಳೆಗಳನ್ನು ಇದೀಗ ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ವರ್ತಕರು, ದಲ್ಲಾಳಿಗಳು ವಿವಿಧ ಹಂತಗಳಲ್ಲಿ ವಸೂಲಿ ಮಾಡುತ್ತಿರುವುದರಿಂದ ರೈತರು ಕಷ್ಟಪಟ್ಟು ಬೆಳೆ ಬೆಳೆದೂ ಸಹ ನಷ್ಟ ಅನುಭವಿಸುವಂತಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಈ ಬಾರಿ ಉತ್ತಮ ಮಳೆಯಾದ ಪರಿಣಾಮ ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆಗಳ ಉತ್ತಮ ಉತ್ಪನ್ನ ಬಂದಿದೆ. ಸಾಲ ಮಾಡಿ ಬೆಳೆ ಬೆಳೆದ ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಿ ಸಾಲ ತೀರಿಸಿಕೊಳ್ಳುವ ಭರದಲ್ಲಿದ್ದು, ಇದನ್ನೇ ಬಳಸಿಕೊಳ್ಳುತ್ತಿರುವ ದಲ್ಲಾಳಿಗಳು, ವರ್ತಕರು ಹಾಗೂ ಹಮಾಲಿಗಳು, ಸ್ಯಾಂಪಲ್, ಕೂಲಿ, ಕಮಿಷನ್ ಹೆಸರಿನಲ್ಲಿ ರೈತರ ಬೆಳೆಗೆ ರೈತರಿಂದಲೇ ಸುಲಿಗೆ ಮಾಡುತ್ತಿದ್ದಾರೆ. ಇದು ಎಪಿಎಂಸಿ ನಿಯಮದ ಉಲ್ಲಂಘನೆಯಾಗಿದ್ದರೂ ಸಹ ಮಾರುಕಟ್ಟೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಮಾರುಕಟ್ಟೆಗೆ ಬೆಳೆಯೊಂದಿಗೆ ಬರುವ ರೈತರಿಂದ ಹಮಾಲರ ಕೂಲಿ ರೂಪದಲ್ಲಿ 60 ಕೆಜಿಯ ಪ್ರತಿ ಚೀಲಕ್ಕೆ 6 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ನಿಯಮದ ಪ್ರಕಾರ ಇದನ್ನು ನೀಡಿದ ಬಳಿಕ ಬೇರೆ ಯಾವುದೇ ಶುಲ್ಕವನ್ನೂ ಪಡೆಯುವಂತಿಲ್ಲ.
ಆದರೆ ಕೂಲಿ ಶುಲ್ಕ ನೀಡಿದ ಬಳಿಕವೂ ಮಾಲು ಇಳಿಸುವ ಹಮಾಲರು ಸ್ಯಾಂಪಲ್ ರೂಪದಲ್ಲಿ 50 ಚೀಲಕ್ಕೆ 60 ಕೆಜಿಯಷ್ಟು ಮೆಕ್ಕೆಜೋಳವನ್ನು ರೈತರಿಂದ ವಸೂಲಿ ಮಾಡುತ್ತಾರೆ. ದೂರದೂರುಗಳಿಂದ ಬರುವ ರೈತರಿಗೆ ಮಾಲು ಇಳಿಸಿ, ತೂಕ ಮಾಡಿ, ಚೀಲ ಕಟ್ಟಿ ಇಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಹಮಾಲರ ಹೊರೆಯನ್ನು ರೈತ ಹೊರುವಂತಾಗಿದೆ.