ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ರೈತರ ಉತಾರದಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದ್ದು, ಕೂಡಲೇ ಅಧಿಕಾರಿಗಳು ಆ ಹೆಸರನ್ನು ತೆಗೆಯದಿದ್ದರೆ ಕಚೇರಿಗೆ ಬಾರಕೋಲ್ ತರುತ್ತೇವೆ ಎಂದು ಗ್ರಾಮದ ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೌದು, ಉಪ್ಪಿನಬೆಟಗೇರಿಯ ಮರಬಸಪ್ಪ ಮಸೂತಿ ಅವರ ಕುಟುಂಬದವರು ತಲೆತಲಾಂತರದಿಂದ ಉಳುಮೆ ಮಾಡುತ್ತಿದ್ದ 3.13 ಎಕರೆ ಹೊಲದ ಪಹಣಿಯ 11ನೇ ಕಾಲಂನಲ್ಲಿ 2019ರಲ್ಲಿಯೇ ವಕ್ಫ್ ಹೆಸರು ಸೇರ್ಪಡೆಯಾಗಿದೆ. ಬರೋಬ್ಬರಿ 5 ವರ್ಷ ಆತ್ರಿ ನಾನು ತಹಸೀಲ್ದಾರ್ ಕಚೇರಿ, ವಕ್ಫ್ ಕಚೇರಿ ಅಡ್ಡಾದಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನೂ ಅದೇ ಗ್ರಾಮದ ಗಂಗಪ್ಪ ಜವಳಗಿ ಕುಟುಂಬದ 20 ಎಕರೆಯ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ರೈತರು ಹೊಲ ಮಾರಿದಾಗ, ಮಕ್ಕಳಿಗೆ ಭಕ್ಷಿಸ್ ಕೊಟ್ಟಾಗ ಉತಾರದಲ್ಲಿ ತಿಂಗಳುಗಟ್ಟಲೇ ಹೆಸರು ಸೇರಿಸದ ಕಂದಾಯ ಇಲಾಖೆ ಅಧಿಕಾರಿಗಳು, ತಮ್ಮ ತಪ್ಪನ್ನು ಸರಿ ಮಾಡಲು ಮೀನಮೇಷ ಎನಿಸುತ್ತಿದ್ದಾರೆ. ಇನ್ಮುಂದೆ ಯಾವುದೇ ಕಾರಣಕ್ಕೂ ನಾವು ತಹಸೀಲ್ದಾರ್ ಕಚೇರಿಗೆ ಮನವಿ ಕೊಡೋದಿಲ್ಲ. ಅವರೇ ಮೊದಲಿನಂತೆ ಪಹಣಿ ಸರಿಪಡಿಸಬೇಕು, ಇಲ್ಲವಾದರೆ ತಹಸೀಲ್ದಾರ್ ಕಚೇರಿಗೆ ಬಾಲಕೋಲ್‌ನೊಂದಿಗೆ ಬರಲಿದ್ದೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಮರಬಸಪ್ಪನವರ ಅಳಲು:
ಕಚೇರಿಗೆ ಹೋಗಿ ನಮ್ಮ ಮುತ್ತಜ್ಜನ ಕಾಲದಿಂದಲೂ ಹೊಲಾ ಊಳಾಕತ್ತೈವಿ ಅಂತಾ ಹೇಳುದಲ್ಲದ, ಅವರು ಕೇಳಿದ ಎಲ್ಲ ದಾಖಲೆಪತ್ರ ಕೊಟ್ಟೇವೆ. ನಿಮ್ಮು ಡಾಕುಮೆಂಟ್ ಎಲ್ಲ ಕರೆಕ್ಟ್ ಅದಾವು ಅಂತ ಬಾಯ್ ಮಾತನಾಗ ಹೇಳಿತಿದ್ರ ಹೊರತು ಉತಾರದಾಗ ವಕ್ಫ್ ಹೆಸರ್ ಮಾತ್ರ ಕಡಮಿ ಮಾಡಲಿಲ್ಲ. ಕಚೇರಿಗಳಿಗೆ ಅಲೆದು ಎಲ್ಲ ದಾಖಲೆ ನೀಡಿದಾಗ ಅಧಿಕಾರಿಗಳು, ಹೌದು ಇದು ನಿಮ್ಮ ಆಸ್ತಿಯೇ ಎನ್ನುತ್ತಿದ್ದರೆ ಹೊರತು ಯಾರಿಂದಲೂ ಪರಿಹಾರ ಸಿಗಲಿಲ್ಲ ಎಂದು ಮರಬಸಪ್ಪ ತಿಳಿಸಿದ್ದಾರೆ.
ಮುಸ್ಲಿಂ ಅಂದುಕೊಂಡು ಸೇರಿಸಿದ್ದಾರೆ:
ವಕ್ಫ್ ಹೆಸರು ಸೇರ್ಪಡೆ ವಿಷಯವನ್ನು ಯಾರಿಗಾದರೂ ಹೇಳಿದರೆ ಏನಾದರೂ ತೊಂದರೆ ಆಗುತ್ತೆಂದು ಯಾರಿಗೂ ಹೇಳಿರಲಿಲ್ಲ. ಕೊನೆಗೆ ಪಹಣಿಯಲ್ಲಿ ವಕ್ಫ್ ಹೆಸರು ಏಕೆ ಬಂತೆಂದು ಹುಡುಕಿದಾಗ, ಹನುಮನಕೊಪ್ಪ, ಉಪ್ಪಿನಬೆಟಗೇರಿ ಹಾಗೂ ಸೈಬನಕೊಪ್ಪ ಈ 3 ಗ್ರಾಮಗಳು ಒಂದೆಡೆ ಇದ್ದು, ಸೈಬನಕೊಪ್ಪದ ಸರ್ವೇ ನಂ.29ರಲ್ಲಿ ದರ್ಗಾ ಇತ್ತು. ಆ ಸರ್ವೇ ನಂಬರ್ ಸೇರಿಸುವ ಬದಲು, ನಮ್ಮ ಅಡ್ಡಹೆಸರು ಮಸೂತಿ ಎಂದಿರುವ ಕಾರಣ ಮುಸ್ಲಿಂ ಇರಬೇಕೆಂದು ತಿಳಿದು ನಮ್ಮ ಉತಾರದಲ್ಲಿ ವಕ್ಫ್ ಹೆಸರು ಸೇರಿದ್ದಾರೆಂದು ತಿಳಿಯಿತು ಎಂದು ತಿಳಿಸಿದ್ದಾರೆ.