ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡವು 69 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
202 ರನ್ ಗುರಿಯನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ 16.5 ಓವರ್ ಗಳಲ್ಲಿ ಎಲ್ಲಾ 10 ವಿಕೆಟ್ ಗಳನ್ನು ಕಳೆದುಕೊಂಡು 132 ರನ್ ಗಳಿಸಿ 69 ರನ್ ಗಳಿಂದ ಸೋಲಿಗೆ ಶರಣಾಯಿತು.
ಪೂರನ್ ಏಕಾಂಗಿ ಹೋರಾಟ; ರಶೀದ್ ಮ್ಯಾಜಿಕ್:
ಗುರಿ ಬೆನ್ನಟ್ಟಿ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ನಿಕೊಲಸ್ ಪೂರನ್ (77; 37 ಎಸೆತ) ಅವರ ಏಕಾಂಗಿ ಹೋರಾಟ ಹೊರೆತುಪಡಿಸಿದರೆ ಉಳಿದ ಯಾವ ಆಟಗಾರನಿಂದಲೂ ಉತ್ತಮ ಆಟ ಕಂಡು ಬರಲಿಲ್ಲ. ಪೂರನ್ ಹೊರೆತು ಪಡಿಸಿ ನಾಯಕ ಕೆ ಎಲ್ ರಾಹುಲ್ (11; 16 ಎಸೆತ) ಹಾಗೂ ಸಿಮ್ರಾನ್ ಸಿಂಗ್ (11; 8 ಎಸೆತ) ಬಿಟ್ಟರೆ ಯಾರು ಎರಡಂಕಿ ಮೊತ್ತ ದಾಟಲಿಲ್ಲ. ಸನ್ ರೈಸರ್ಸ್ ಹೈದರಾಬಾದ್ ಪರ, ರಶೀದ್ ಖಾನ್ (12ಕ್ಕೆ 3), ಖಲೀಲ್ ಅಹಮದ್ (24ಕ್ಕೆ 2), ಹಾಗೂ ನಟರಾಜನ್ (24ಕ್ಕೆ 2) ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬೆರ್ಸ್ಟೋ, ವಾರ್ನರ್ ಜುಗಲ್ ಬಂದಿ:
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರರಾದ ಜಾನಿ ಬೆರ್ಸ್ಟೋ (97; 57 ಎಸೆತ ), ನಾಯಕ ಡೇವಿಡ್ ವಾರ್ನರ್ (52; 40 ಎಸೆತ) ಅವರ ಉತ್ತಮ ಜೊತೆಯಾಟ ಹಾಗೂ ವಿಲಿಯಮ್ಸನ್ (20; 10 ಎಸೆತ ) ಅವರ ಉತ್ತಮ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 201 ರನ್ ಗಳ ಬೃಹತ್ ಮೊತ್ತ ಗಳಿಸಿತು. ಪಂಜಾಬ್ ಪರ, ರವಿ ಬಿಶೋನೈ (29ಕ್ಕೆ 3), ಅರ್ಶದೀಪ್ ನಾಥ್ (33ಕ್ಕೆ 2) ವಿಕೆಟ್ ಪಡೆದರು.
ಸನ್ ರೈಸರ್ಸ್ ತಂಡದ ಪರ ಅಮೋಘ ಪ್ರದರ್ಶನ ನೀಡಿದ ಜಾನಿ ಬೆರ್ಸ್ಟ್ರೋ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.