ಕಾರವಾರ: ರಾಜ್ಯದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ ಗೋವಾ ಮಾರ್ಗವಾಗಿ ಜಿಲ್ಲೆಗೆ ಆಗಮಿಸಿದ ಗೃಹ ಸಚಿವರನ್ನು ಕರ್ನಾಟಕ-ಗೋವಾ ಗಡಿ ಮಾಜಾಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೂಗುಚ್ಛ ನೀಡಿ ಸ್ವಾಗತಿಸುವ ಮೂಲಕ ಬರಮಾಡಿಕೊಂಡರು.
ಇದೀಗ ರಸ್ತೆ ಮಾರ್ಗವಾಗಿ ಗೋಕರ್ಣಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ ನೀಡಲಿದ್ದು, ಅಲ್ಲಿ ಮಹಾಗಣಪತಿ ಹಾಗೂ ಮಹಾಬಲೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಅಲ್ಲಿಂದ ಮಧ್ಯಾಹ್ನ 2.30 ರಿಂದ 3.30 ಗಂಟೆಯವರೆಗೆ, ಎಸ್.ಪಿ. ಕಚೇರಿಯಲ್ಲಿ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಖರೀದಿಸಿ ಪೊಲೀಸ್ ಇಲಾಖೆಗೆ ನೀಡಿರುವ ಹೊಸ ವಾಹನಗಳಿಗೆ ಚಾಲನೆ ನೀಡಲಿದ್ದಾರೆ.
ಬಳಿಕ ಶಿರಸಿ ನಗರದ ನೂತನ ಟ್ರಾಫಿಕ್ ಪೊಲೀಸ್ ಠಾಣೆಗೆ ವೆಬ್ ಕಾಸ್ಟ್ ಮೂಲಕ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಮಾದಕ ವಸ್ತು ಮತ್ತು ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ಚಿತ್ರಿಸಲಾಗಿರುವ ವಿಡಿಯೋಗಳನ್ನು ಬಿಡುಗಡೆಗೊಳಿಸಲಿದ್ದಾರೆ. ನಂತರ 1.15 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾದ ಜಿಲ್ಲಾ ಪೊಲೀಸ್ ಕಚೇರಿಯ ವಿವಿಧ ವಿಭಾಗಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಗೃಹ ಸಚಿವರು ಭಾಗವಹಿಸಲಿದ್ದಾರೆ.
ನಂತರ ಮಧ್ಯಾಹ್ನ 3.30 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ಜಿಲ್ಲೆಯಲ್ಲಿಯೇ ವಾಸ್ತವ್ಯ ಮಾಡುವ ಸಚಿವರು, ಮರುದಿನ ಮಾರ್ಚ್ 27 ರಂದು ಸಂಜೆ 5.30ಕ್ಕೆ ಕಾರವಾರದಿಂದ ಬೆಂಗಳೂರಿಗೆ ತೆರಳಲಿದ್ದಾರೆ.