Holi Festival : ಹೋಳಿ ಪುರಾತನ ಕಾಲದಿಂದ ಕೃಷಿ ಮತ್ತು ವಸಂತ ಋತುವಿನ ಹಬ್ಬವಾಗಿಯೂ ಆಚರಿಸಲಾಗುತ್ತಿದೆ. ಇದನ್ನು ಪ್ರೀತಿಯ, ಬಣ್ಣಗಳ ಹಬ್ಬ, ಮತ್ತು ದ್ವೇಷದ ಅಂತ್ಯವನ್ನು ಸೂಚಿಸುವ ಹಬ್ಬವೆ೦ದೂ ಕರೆಯಲಾಗುತ್ತದೆ. ಇದು ಚೈತ್ರ ಮಾಸದ ಪ್ರಾರ೦ಭವನ್ನು ಸೂಚಿಸುವ ಹಬ್ಬವಾಗಿದ್ದು, ಹೋಳಿಯ೦ದು ಎಲ್ಲರೂ ಬಣ್ಣಗಳನ್ನು ಎರಚಿಕೊ೦ಡು ಹೋಳಿ ಆಡುವುದು ಸಂಪ್ರದಾಯವಾಗಿದೆ. ಇದರ ಹಿನ್ನೆಲೆ ಮತ್ತು ಮಹತ್ವ ಇಲ್ಲಿ ತಿಳಿದುಕೊಳ್ಳಿ.
ಹೋಳಿ ಯಾವಾಗ?
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯ೦ದು ಹೋಳಿಹಬ್ಬ ಅಥವಾ ಕಾಮನಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿ ಹಬ್ಬವನ್ನು ಈ ಬಾರಿ ಮಾ.14, ಶುಕ್ರವಾರದಂದು ಆಚರಿಸಲಾಗುತ್ತದೆ. ಹೋಳಿಕಾ ದಹನವು ಮಾರ್ಚ್ 13, ಗುರುವಾರದಂದು ರಾತ್ರಿ 11:26 ರಿಂದ 12:30ರವರೆಗೆ ನಡೆಯಲಿದೆ.
ಹೋಳಿಕಾ ದಹನದ ಹಿನ್ನೆಲೆ
ಹೋಳಿ ಹಬ್ಬದ ಪ್ರಮುಖ ಕಥೆ ಹೀಗಿದೆ. ಹಿರಣ್ಯಕಶಿಪು, ನಾರಾಯಣನ ಭಕ್ತನಾದ ತನ್ನ ಮಗ ಪ್ರಹ್ಲಾದನನ್ನು ನಾಶ ಮಾಡಲು ಹೋಳಿಕಾಳ ಸಹಾಯವನ್ನು ಕೋರಿದ್ದನು. ಪ್ರಹ್ಲಾದನನ್ನು ಬೆಂಕಿಯಲ್ಲಿ ಸುಡಲು ಬ೦ದಿದ್ದ ಹೋಳಿಕಾ ತಾನೇ ಸುಟ್ಟು ಹೋದಳು ಮತ್ತು ಪ್ರಹ್ಲಾದನನ್ನು ಆತನ ಭಕ್ತಿಯ ಶಕ್ತಿ ರಕ್ಷಿಸಿತ್ತು. ಇದನ್ನೇ ಹೋಳಿಕಾ ದಹನವೆಂದು ಕರೆಯಲಾಗುತ್ತದೆ.
ಕೃಷ್ಣಮತ್ತು ರಾಧೆಯ ಕತೆ
ಹೋಳಿ ಹಬ್ಬವನ್ನು ಶ್ರೀಕೃಷ್ಣ ಮತ್ತು ರಾಧೆಯ ಕತೆಗೂ ಸ೦ಬ೦ಧಿಸಲಾಗಿದೆ. ಅವರಿಬ್ಬರು ಗೋಪಿಕೆಯರೊಡನೆ ಕೂಡಿ ಬಣ್ಣದ ಆಟವನ್ನು ಆಡಿದ್ದರು. ಇದರಿ೦ದಾಗಿಯೇ ಹೋಳಿ ಹಬ್ಬವನ್ನು ಪ್ರೇಮ ಮತ್ತು ಸಮಾನತೆಯ ಸಂಕೇತವಾಗಿ ಪರಿಗಣಸಿಲಾಗುತ್ತದೆ.
ಕಾಮನದಹನ
ದೇವರುಗಳ ಒತ್ತಾಯದಿ೦ದ ಕಾಮದೇವನು ಶಿವನ ತಪಸ್ಸನ್ನು ಭಂಗ ಮಾಡಲು ಪ್ರಯತ್ನಿಸಿದ್ದನು. ಇದರಿಂದ ಕೋಪಗೊ೦ಡ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಕಾಮದೇವನನ್ನು ಭಸ್ಮಮಾಡಿದ್ದನು. ನಂತರ, ಕಾಮದೇವನ ಪತ್ನಿಯಾದ ರತಿಯ ಪ್ರಾರ್ಥನೆಯಿಂದ ಅವನ ಪುನರ್ಜನ್ಮವಾದ ದಿನ ಇದು ಎ೦ದು ನ೦ಬಲಾಗಿದೆ.
ಹೋಳಿಯ ಮಹತ್ವ
ಹೋಳಿ ಹಬ್ಬವು ದ್ವೇಷ ಮತ್ತು ಅಸಹಿಷ್ಣುತೆಯ ಅಂತ್ಯವನ್ನು ಸೂಚಿಸಿ ಸಮಾನತೆ, ಪ್ರೀತಿ, ಸ್ನೇಹ, ಮತ್ತು ಬಾಂಧವ್ಯವನ್ನು ತೋರಿಸುವ ಹಬ್ಬ. ಪುರಾತನ ಕಾಲದಿಂದ ಸಾಮಾಜಿಕ ಭಿನ್ನತೆಗಳನ್ನು ಮರೆತು ಎಲ್ಲರೂ ಒಟ್ಟಾಗಿ ಹಬ್ಬವನ್ನಾಚರಿಸುತ್ತಾರೆ. ಹಾಗೆ, ವಿವಿಧ ರಾಜ್ಯಗಳಲ್ಲಿ ವಿಭಿನ್ನ ಸಂಪ್ರದಾಯಗಳ ಮೂಲಕ ಹೋಳಿಯನ್ನು ಆಚರಿಸಲಾಗುತ್ತದೆ.