ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ ಮುಂದುವರಿದಿದ್ದು, ಜುಲೈ 1ರವರೆಗೆ ಭಾರಿ ಮಳೆಯ ಸುರಿಯುವ ಮುನ್ಸೂಚನೆ ದೊರಕಿದ್ದು, ಹವಾಮಾನ ಇಲಾಖೆಯ ಪ್ರಕಾರ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಸುರಿಯಲಿದ್ದು, ಉತ್ತರ ಒಳನಾಡಿನಲ್ಲೂ ಮಳೆಯ ಅಬ್ಬರ ಇರಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಇಂದು, ನಾಳೆ ಮತ್ತು ಶುಕ್ರವಾರದವರೆಗೆ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಉಳಿದಂತೆ ರಾಜ್ಯಾದ್ಯಂತ ಮೋಡ ಕವಿದ ವಾತಾವರಣವಿರಲಿದೆ.
ಉತ್ತರ ಭಾರತದಲ್ಲಿ ರೆಡ್ ಅಲರ್ಟ್:
ಇನ್ನು, ದೇಶದಲ್ಲಿ ಕೂಡ ಮಳೆಯ ಪ್ರಮಾಣ ಉತ್ತಮವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಮಾನ್ಸೂನ್ ಬಿಹಾರ, ಉತ್ತರ ಪ್ರದೇಶದ ಕೆಲವು ಭಾಗಗಳು ಮತ್ತು ಉತ್ತರಾ ಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಿಗೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಉತ್ತರ ಭಾರತದ ಹಲವೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.