ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ಮತ್ತು ಆಧುನಿಕ ಯುಗದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಇಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ನವೆಂಬರ್ 5, 1988 ರಂದು ಜನಿಸಿದ ಕೊಹ್ಲಿ, 19 ನೇ ವಯಸ್ಸಿನಲ್ಲಿ ಶ್ರೀಲಂಕಾ ವಿರುದ್ಧ ದಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಮತ್ತು ಅಂದಿನಿಂದ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.ವಿರಾಟ್ ಕೊಹ್ಲಿ ಅವರು ಸದ್ಯ ವಿಶ್ವ ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್ ಆಗಿದ್ದು ವಿಶ್ವದ ಘಟಾನುಘಟಿ ಬೌಲರ್ಗಳನ್ನೂ ತಮ್ಮ ಬ್ಯಾಟಿಂಗ್ ನಿಂದ ಇನ್ನಿಲ್ಲದಂತೆ ದಂಡಿಸಿದ್ದಾರೆ.
ವಿರಾಟ್ ಕೊಹ್ಲಿ ದೇಶದ ಪರ ಇಲ್ಲಿಯವರೆಗೆ 86 ಟೆಸ್ಟ್, 248 ಏಕದಿನ ಹಾಗು 81 t20 ಪಂದ್ಯಗಳನ್ನು ಆಡಿದ್ದಾರೆ. ಇನ್ನು 86 ಟೆಸ್ಟ್ ಪಂದ್ಯಗಳಿಂದ 7240 ಗಳಿಸಿದ್ದು, 27 ಶತಕ ಮತ್ತು 22 ಅರ್ಧ ಶತಕ ಸಿಡಿಸಿದ್ದಾರೆ. 248 ಏಕದಿನ ಪಂದ್ಯಗಳಿಂದ 11867 ರನ್ ಗಳಿಸಿದ್ದು, 43 ಶತಕ 58 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಮತ್ತು 81 t 20 ಪಂದ್ಯಗಳಿಂದ 2794 ರನ್ ಗಳಿಸಿದ್ದು, 24 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.
ಕೊಹ್ಲಿ ಸದ್ಯ ಯುಎಇ ನಲ್ಲಿ ನಡೆಯುತ್ತಿರುವ ಐಪಿಎಲ್ 2020 ರ 13 ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಯಶಸ್ವಿಯಾಗಿ ಮುನ್ನೆಡುತ್ತಿದ್ದಾರೆ. ಇನ್ನು ಕೊಹ್ಲಿ ಇಲ್ಲಿಯವರೆಗೆ 191 t20 ಐಪಿಎಲ್ ಪಂದ್ಯಗಳನ್ನಾಡಿದ್ದು 5872 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಸೇರಿದಂತೆ 39 ಅರ್ಧ ಶತಕಗಳು ಸೇರಿವೆ.
ಸದ್ಯ 32 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಅವರಿಗೆ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಕೋರಿದ್ದಾರೆ.