ಉತ್ತರ ಪ್ರದೇಶ: ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ನೋಡುತ್ತೀರಿ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಬೆದರಿಸಿ ಶಿಕ್ಷಕಿಯಿಂದ ಸೈಬರ್ ವಂಚಕರು ಬರೋಬ್ಬರಿ 72 ಸಾವಿರ ರೂ. ವಂಚಿಸಿದ ಘಟನೆ ಗೋರಖ್‌ಪುರದ ಗಗಹಾ ನಗರದಲ್ಲಿ ನಡೆದಿದೆ. ಮರ್ಯಾದೆಗೆ ಅಂಜಿ ಮೊದಲು ಪ್ರಕರಣವನ್ನು ಗುಪ್ತವಾಗಿರಿಸಿದ್ದ ಶಿಕ್ಷಕಿ, ಬಳಿಕ ವಂಚಕರಿಂದ ಮತ್ತೆ ಹಣಕ್ಕೆ ಬೇಡಿಕೆ ಬಂದ ಹಿನ್ನಲೆ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಕಳೆದ ನವೆಂಬರ್ 26 ರಂದು ಶಿಕ್ಷಕರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿತ್ತು. ಆ ಸಂಖ್ಯೆಯ ಡಿಪಿಯಲ್ಲಿ ‘ಕ್ರೈಂ ಬ್ರಾಂಚ್ ಗೋರಖ್‌ಪುರ’ ಎಂಬ ಲೋಗೋ ಇತ್ತು. ಶಿಕ್ಷಕಿ ಕರೆ ಸ್ವೀಕರಿಸಿದಾಗ, ವ್ಯಕ್ತಿಯೊಬ್ಬರು ‘ನಾನು ಕ್ರೈಂ ಬ್ರಾಂಚ್‌ನಿಂದ ಕರೆ ಮಾಡುತ್ತಿದ್ದೇನೆ’ ಎಂದು ಪರಿಚಯಿಸಿಕೊಂಡಿದ್ದಾನೆ.
ಬಳಿಕ ‘ನೀವು ನಿಮ್ಮ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡುತ್ತಿದ್ದೀರಿ, ಇದು ದೇಶದಲ್ಲಿ ನಿಷೇಧಿಸಲ್ಪಟ್ಟಿದೆ. ನಿಮ್ಮ ಮೊಬೈಲ್‌ನ ಎಲ್ಲಾ ಹಿಸ್ಟರಿಯನ್ನು ನಾವು ಪರಿಶೀಲಿಸಿದ್ದೇವೆ. ನಿಮ್ಮ ವಿರುದ್ಧ ಈಗಲೇ ಪ್ರಕರಣ ದಾಖಲಾಗುತ್ತಿದೆ, ನೀವು ನಿಮ್ಮ ಕೆಲಸವನ್ನು ಕಳೆದುಕೊಳ್ಳಬಹುದು’ ಎಂದು ಆ ವ್ಯಕ್ತಿ ಬೆದರಿಸಿದ್ದು, ಇದರಿಂದ ಆತಂಕಗೊಂಡ ಶಿಕ್ಷಕಿ ಭಯದಿಂದ ಅಳು ತೋಡಿಕೊಂಡಿದ್ದಾರೆ.
ಪ್ರಕರಣ ದಾಖಲಾಗುವುದನ್ನು ತಪ್ಪಿಸಲು ಬಯಸಿದರೆ ತಕ್ಷಣ 1 ಲಕ್ಷ ರೂಪಾಯಿ ಕಳುಹಿಸಿ ಎಂದು ಕರೆ ಮಾಡಿದ ವ್ಯಕ್ತಿ ಬೇಡಿಕೆ ಇಟ್ಟಿದ್ದಾನೆ. ಆಗ ಶಿಕ್ಷಕಿ ‘ನನ್ನ ಖಾತೆಯಲ್ಲಿ ಕೇವಲ 72 ಸಾವಿರ ರೂ. ಮಾತ್ರವಿದೆ’ ಎಂದು ಹೇಳಿದಾಗ, ವ್ಯಕ್ತಿಯು ಯುಪಿಐ ನಂಬರ್ ಒದಗಿಸಿದ್ದು, ಆ ನಂಬರ್‌ಗೆ ಶಿಕ್ಷಕಿ 72 ಸಾವಿರ ರೂ. ಕಳುಹಿಸಿದರು.
ಇದಾದ ಬಳಿಕ ಈ ಸಂಗತಿಯನ್ನು ಶಿಕ್ಷಕಿ ಯಾರ ಬಳಿಯೂ ಹೇಳಿರಲಿಲ್ಲ. ಕೆಲವು ದಿನಗಳ ನಂತರ, ಅದೇ ಸಂಖ್ಯೆಯಿಂದ ಮತ್ತೆ ಕರೆ ಬಂದು 1 ಲಕ್ಷ ರೂ. ಕೇಳಿದಾಗ, ಶಿಕ್ಷಕಿ ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದು ಸದ್ಯ IGRS ಹಾಗೂ ಗಗಹಾ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.