ದೆಹಲಿಯಿಂದ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಪ್ರಯಾಣಿಸಲು ಗೂಗಲ್ ಮ್ಯಾಪ್ ಹಾಕಿ ಹೊರಟಿದ್ದ ಇಬ್ಬರು ಫ್ರೆಂಚ್ ಪ್ರವಾಸಿಗರು ದಾರಿ ತಪ್ಪಿ ಉತ್ತರ ಪ್ರದೇಶದ ಬರೇಲಿಯಲ್ಲಿ ಸಿಲುಕಿದ ಘಟನೆ ನಡೆದಿದೆ.
ಬ್ರಿಯಾನ್ ಜಾಕ್ವೆಸ್ ಗಿಲ್ಬರ್ಟ್ ಮತ್ತು ಸೆಬಾಸ್ಟಿಯನ್ ಫ್ರಾಂಕೋಯಿಸ್ ಗೇಬ್ರಿಯಲ್ ಅವರು ಮಾರ್ಗ ತಿಳಿಯಲು ಗೂಗಲ್ ಮ್ಯಾಪ್ಸ್ ಅನ್ನು ಬಳಸುತ್ತಿದ್ದರು. ಆದರೆ ಅವರು ಅಪ್ಲಿಕೇಶನ್ ಸೂಚಿಸಿದ ಶಾರ್ಟ್ಕಟ್ ಅನ್ನು ನಂಬಿ ಹೋದ ವೇಳೆ ಚುರೈಲಿ ಅಣೆಕಟ್ಟು ಪ್ರದೇಶದಲ್ಲಿ ದಾರಿ ತಪ್ಪಿ ಕಳೆದುಹೋದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ರಾತ್ರಿ 11 ಗಂಟೆಗೆ ನಿರ್ಜನ ರಸ್ತೆಯಲ್ಲಿ ಫ್ರೆಂಚ್ ಪ್ರಜೆಗಳನ್ನು ನೋಡಿದ ಗ್ರಾಮಸ್ಥರು ಅವರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ಜನವರಿ 7 ರಂದು ಅವರು ಫ್ರಾನ್ಸ್ನಿಂದ ವಿಮಾನದಲ್ಲಿ ದೆಹಲಿಗೆ ಬಂದಿದ್ದರು. ಅವರು ಪಿಲಿಭಿತ್ನಿಂದ ತನಕ್ಪುರದ ಮೂಲಕ ನೇಪಾಳದ ಕಠ್ಮಂಡುವಿಗೆ ಹೋಗಬೇಕಾಗಿತ್ತು. ಇಬ್ಬರೂ ವಿದೇಶಿಯರನ್ನು ಗೂಗಲ್ ಮ್ಯಾಪ್ಸ್ ದಾರಿ ತಪ್ಪಿಸಿದೆ. ಅಪ್ಲಿಕೇಶನ್ ಅವರಿಗೆ ಬರೇಲಿಯ ಬಹೆರಿ ಮೂಲಕ ಶಾರ್ಟ್ಕಟ್ ಅನ್ನು ತೋರಿಸಿತು, ಇದರಿಂದಾಗಿ ಅವರು ದಾರಿ ತಪ್ಪಿ ಚುರೈಲಿ ಅಣೆಕಟ್ಟನ್ನು ತಲುಪಿದರು.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಅವರು ದಾರಿತಪ್ಪಿದ ವಿದೇಶಿಗರಿಗೆ ಅವರ ಗಮ್ಯಸ್ಥಾನಕ್ಕೆ ಮಾರ್ಗದರ್ಶನ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದರು.