ತಿರುಪತಿ: 4 ವರ್ಷದ ಬಾಲಕಿಯ ಮೇಲೆ ಆಕೆಯ ದೂರದ ಸಂಬಂಧಿಯೇ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ತಿರುಪತಿ ಜಿಲ್ಲೆಯ ಗ್ರಾಮವೊಂದರಲ್ಲಿ ಶನಿವಾರ ನಡೆದಿದೆ. ಸಂತ್ರಸ್ತೆಯ ಸಂಬಂಧಿ, ಚಿಕ್ಕಪ್ಪ ನಾಗರಾಜು(24) ಶುಕ್ರವಾರ ಸಂಜೆ ತಿಂಡಿ ಕೊಡಿಸುವುದಾಗಿ ಬಾಲಕಿಯನ್ನು ಎಎಂ ಪುರಂ ಗ್ರಾಮದ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಹತ್ಯೆಗೈದಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ತಿರುಪತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ಸುಬ್ಬರಾಯುಡು, ನಾಗರಾಜು ಬಾಲಕಿಯ ಮನೆಯ ಬಳಿ ವಾಸವಾಗಿದ್ದು, ಆಕೆಯೊಂದಿಗೆ ದಿನನಿತ್ಯ ಆಟವಾಡುತ್ತಿದ್ದ. ಶುಕ್ರವಾರ ಸಂಜೆ ಆಕೆಯನ್ನು ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸಿದ್ದಾನೆ. ಬಳಿಕ ಆಕೆಯನ್ನು ಮನೆಯಿಂದ ದೂರ ನಿರ್ಜನ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆಗೈದಿದ್ದಾನೆ ಎಂದು ಅವರು ತಿಳಿಸಿದ್ದಾರೆ. ನಂತರ ಬಾಲಕಿ ಕಾಣೆಯಾಗಿರುವುದನ್ನು ಗಮನಿಸಿದ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದು, ಬಾಲಕಿ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಬಾಲಕಿ ನಾಗರಾಜು ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿತ್ತು.
ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ನಾಗರಾಜುನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ನಂತರ ಬಾಲಕಿಯ ಶವವನ್ನು ಹುಡುಕಲು ಆರೋಪಿ ನಾಗರಾಜುನನ್ನು ಕರೆದುಕೊಂಡು ಹೋದ ಪೊಲೀಸರು ರಾತ್ರಿ 9 ಗಂಟೆ ಸುಮಾರಿಗೆ ಸರ್ಕಾರಿ ಶಾಲೆಯ ಬಳಿ ಬಾಲಕಿಯ ಶವವನ್ನು ಪತ್ತೆಹಚ್ಚಿದ್ದಾರೆ.
ನಾಗರಾಜು ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ (POCSO) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಶನಿವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ಶೀಘ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ತಿರುಪತಿ ಎಸ್ಪಿ ಹೇಳಿದ್ದಾರೆ.