ಗದಗ: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿ ಬಸ್ ಚಕ್ರದಡಿ ಸಿಲುಕಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ನಡೆದಿದೆ. ರಾಘವೇಂದ್ರ(21) ಮೃತ ವಿದ್ಯಾರ್ಥಿಯಾಗಿದ್ದಾನೆ.
ವಿದ್ಯಾರ್ಥಿ ರಾಘವೇಂದ್ರ ಕೊಣ್ಣೂರಿನಿಂದ ನರಗುಂದ ಕಾಲೇಜಿಗೆ ಹೊರಟಿದ್ದ. ರಾಮದುರ್ಗ ಹೊಸಪೇಟೆ ಬಸ್‌ನಲ್ಲಿ ಹೊರಟಿದ್ದ ವಿದ್ಯಾರ್ಥಿ ಬಸ್ ರಷ್ ಇದ್ದ ಹಿನ್ನಲೆ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದ. ಬಸ್ ನಿಲ್ದಾಣದ ಬಳಿ ಆಗಮಿಸಿದ ಬಸ್ಸು ರಸ್ತೆ ಗುಂಡಿಗೆ ಇಳಿಯುತ್ತಿದ್ದಂತೆ ನಿಯಂತ್ರಣ ತಪ್ಪಿದ ವಿದ್ಯಾರ್ಥಿ ರಾಘವೇಂದ್ರ ಕೆಳಗೆ ಬಿದ್ದಿದ್ದಾನೆ.
ಕೆಳಗೆ ಬಿದ್ದ ರಾಘವೇಂದ್ರ ತಲೆ ಮೇಲೆ ಬಸ್ ಹಿಂಬದಿ ಚಕ್ರ ಹರಿದಿದ್ದು, ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿ ಶವವನ್ನು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.