ಮಂಡ್ಯ: ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲೆಂದು ಬ್ಯಾಗ್ ತೆಗೆದುಕೊಂಡ ಹೋದ ತಂದೆಯೂ ಬಂಧನಕ್ಕೊಳಗಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವಣ್ಣ ಬಂಧನಕ್ಕೊಳಗಾದ ದುರ್ದೈವಿ ತಂದೆಯಾಗಿದ್ದಾರೆ.
ಶಿವಣ್ಣನ ಮಗ ಮಧುಸೂದನ್ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಈ ವೇಳೆ ಜೈಲಿನಿಂದ ತಂದೆಗೆ ಕರೆಮಾಡಿದ್ದ ಮಧುಸೂದನ ಮಳವಳ್ಳಿಯಲ್ಲಿ ತನ್ನ ಪರಿಚಯಸ್ಥರೊಬ್ಬರು ಬಟ್ಟೆಯ ಬ್ಯಾಗ್ ಕೊಡುತ್ತಾರೆ, ಅದನ್ನು ತೆಗೆದುಕೊಂಡು ಜೈಲಿಗೆ ತಂದುಕೊಡುವಂತೆ ತಿಳಿಸಿದ್ದ.
ಮಗನಿಗೆ ಬಟ್ಟೆ ಬೇಕಾಗಿದೆ ಎಂದು ತಂದೆ ಶಿವಣ್ಣ ಮಳವಳ್ಳಿಗೆ ತೆರಳಿ ಪರಿಚಯಸ್ಥ ಕೊಟ್ಟ ಬ್ಯಾಗ್ ತೆಗೆದುಕೊಂಡು ಮಗನನ್ನು ನೋಡಲು ಜೈಲಿಗೆ ಬಂದಿದ್ದಾನೆ. ಈ ವೇಳೆ ಬ್ಯಾಗನ್ನು ಪರಿಶೀಲನೆ ಮಾಡಿದ ಮಂಡ್ಯ ಕಾರಾಗೃಹ ಸಿಬ್ಬಂದಿಗೆ ಅದರಲ್ಲಿ 20 ಗ್ರಾಂನಷ್ಟು ಗಾಂಜಾ ಪತ್ತೆಯಾಗಿದೆ.
ತಕ್ಷಣ ಜೈಲಿನ ಸಿಬ್ಬಂದಿ ಶಿವಣ್ಣನನ್ನು ಬಂಧಿಸಿದ್ದು, ಕಾರಾಗೃಹಕ್ಕೆ ಗಾಂಜಾ ತಂದ ಆರೋಪದ ಮೇಲೆ ಎನ್‌ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಗಾಂಜಾ ಕುರಿತು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಕಕ್ಕಾಬಿಕ್ಕಿಯಾದ ಶಿವಣ್ಣ ಮಗ ಹೇಳಿದಂತೆ ಆತನ ಪರಿಚಯಸ್ಥರಿಂದ ಬಟ್ಟೆ ಇದ್ದ ಬ್ಯಾಗ್ ತಂದಿದ್ದಾಗಿ ತಿಳಿಸಿದ್ದು, ಗಾಂಜಾ ಕುರಿತು ಮಾಹಿತಿ ಇಲ್ಲ ಎಂದಿದ್ದಾನೆ. ಸದ್ಯ ಶಿವಣ್ಣನೂ ಮಗನೊಂದಿಗೆ ಸೆರೆವಾಸ ಅನುಭವಿಸುವಂತಾಗಿದೆ.